ಗೌತಮ್ ಗಂಭೀರ್ ತಂದೆಯ ಕಾರು ಕಳವು
ಹೊಸದಿಲ್ಲಿ,ಮೇ 29: ಮಾಜಿ ಕ್ರಿಕೆಟಿಗ ಹಾಗೂ ಪೂರ್ವ ದಿಲ್ಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ತಂದೆಯ ಕಾರನ್ನು ಅವರ ದಿಲ್ಲಿಯ ರಾಜೇಂದ್ರ ನಗರ ಪ್ರದೇಶದಲ್ಲಿರುವ ಮನೆಯ ಹೊರಗಿನಿಂದ ಕಳವು ಗೈದಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ಸಂಭವಿಸಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ದೀಪಕ್ ಗಂಭೀರ್ ಅವರ ಟೊಯೊಟಾ ಫೋರ್ಚುನರ್ ಕಾರನ್ನು ಬುಧವಾರ ಮಧ್ಯಾಹ್ನ 3:30ರ ಸುಮಾರಿಗೆ ತನ್ನ ಮನೆಯ ಎದುರು ಪಾರ್ಕ್ ಮಾಡಿದ್ದರು. ಆದರೆ, ಗುರುವಾರ ಬೆಳಗ್ಗೆ ಕಾರು ನಾಪತ್ತೆಯಾಗಿರುವುದು ಗೊತ್ತಾಗಿದೆ.
"ಗೌತಮ್ ಗಂಭೀರ್ ಮನೆಯಿಂದ ಫೋರ್ಚುನರ್ ಕಾರು ಕಳವಾಗಿರುವ ಮಾಹಿತಿ ನಮಗೆ ಲಭಿಸಿದೆ. ನಾವು ಗಂಭೀರ್ ಅವರ ಮನೆಗೆ ತೆರಳಿ ಅವರ ತಂದೆ ದೀಪಕ್ ಗಂಭೀರ್ರನ್ನು ಭೇಟಿ ಮಾಡಿದ್ದೇವೆ. ಬಿಳಿ ಬಣ್ಣದ ಟೊಯೊಟಾ ಕಾರನ್ನು ಬುಧವಾರ ಮಧ್ಯಾಹ್ನ ತನ್ನ ಮನೆಯ ಎದುರು ಪಾರ್ಕಿಂಗ್ ಮಾಡಿದ್ದೆ. ಗುರುವಾರ ಬೆಳಗ್ಗೆ ಅದು ಕಳವಾಗಿರುವುದು ಗೊತ್ತಾಗಿದೆ ಎಂದು ಅವರು ತಿಳಿಸಿದರು'' ಎನ್ನುವುದಾಗಿ ಡಿಸಿಪಿ(ಸೆಂಟ್ರಲ್)ಸಂಜಯ ಭಾಟಿಯಾ ಹೇಳಿದ್ದಾರೆ.
ಪೊಲೀಸರು ಸಿಸಿಟಿವಿ ಫುಟೇಜ್ನ್ನು ಪರಿಶೀಲಿಸುತ್ತಿದ್ದು,ಆರೋಪಿಯನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಗಂಭೀರ್ ತಂದೆ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ತಕ್ಷಣ ಕೇಂದ್ರ ಜಿಲ್ಲೆಯ ವಿಶೇಷ ಸಿಬ್ಬಂದಿ ಹಾಗೂ ಕ್ರೈಮ್ ಬ್ರಾಂಚ್ ಹಲವು ತಂಡಗಳಿಗೆ ಆರೋಪಿಯನ್ನು ಸೆರೆ ಹಿಡಿಯುವಂತೆ ಸೂಚಿಸಲಾಗಿತ್ತು.