ಬಡ ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸಿ: ಪುಷ್ಪಾ ಅಮರನಾಥ್

ಬೆಂಗಳೂರು, ಮೇ 29: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರು ಬಳಸುವ ಸ್ಯಾನಿಟರ್ ಪ್ಯಾಡ್ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಕಡಿಮೆ ಮಾಡಬೇಕು. ಹಾಗೂ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡಬೇಕೆಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಪುಷ್ಪಾ ಅಮರನಾಥ್ ಒತ್ತಾಯಿಸಿದ್ದಾರೆ.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಮುಟ್ಟಿನ ನೈರ್ಮಲ್ಯದ ದಿನದ ಅಂಗವಾಗಿ ನಗರದ ಮೆಜೆಸ್ಟಿಕ್‍ನಿಂದ ಶ್ರಮಿಕ್ ಟ್ರೈನ್‍ನಲ್ಲಿ ಪ್ರಯಾಣ ಮಾಡುವ ಮಹಿಳಾ ವಲಸೆ ಕಾರ್ಮಿಕರಿಗೆ ಮುಟ್ಟಿನ ಕಪ್ಪನ್ನು ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ರಾಜ್ಯ ಜನತೆಗೆ ಪಡಿತರ ವಿತರಿಸುವ ಸಂದರ್ಭದಲ್ಲಿಯೇ ಉಚಿತವಾಗಿ ಸ್ಯಾನಿಟರಿ ಪ್ಯಾಡ್‍ಗಳನ್ನು ನೀಡಬೇಕೆಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಮಹಿಳೆ ಮುಟ್ಟಾಗುವುದು ಪ್ರಕೃತಿ ನಿಯಮವಾಗಿದ್ದು, ಈ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುವ ಸಂಕಟ, ನೋವುಗಳನ್ನು ಯಾರಿಗೂ ಹೇಳಿಕೊಳ್ಳುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಹಾಗೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಅವರು ಹೇಳಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಖಾನ್, ಭೈರತಿ ಸುರೇಶ್ ಮತ್ತಿತರರಿದ್ದರು.