ಪ್ರಜ್ಞಾ ಠಾಕೂರ್ ಏಮ್ಸ್ನಲ್ಲಿ: ನಾಪತ್ತೆ ಪೋಸ್ಟರ್ಗಳಿಗೆ ಬಿಜೆಪಿ ಪ್ರತಿಕ್ರಿಯೆ

ಭೋಪಾಲ್, ಮೇ 30: ಮಧ್ಯಪ್ರದೇಶದ ರಾಜಧಾನಿಯಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡಿದ್ದರೂ, ಸಂಸದೆ ಪ್ರಜ್ಞಾ ಠಾಕೂರ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಗಳು ನಗರದ ಎಲ್ಲೆಡೆ ರಾರಾಜಿಸುತ್ತಿವೆ. ನಗರದಲ್ಲಿ ಈಗಾಗಲೇ 1,400ಕ್ಕೂ ಹೆಚ್ಚು ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿದೆ.
ಭೋಪಾಲ್ ನಿವಾಸಿಗಳು ಕೊರೋನ ವೈರಸ್ ಸಾಂಕ್ರಾಮಿಕದಿಂದ ಕಂಗೆಟ್ಟಿದ್ದರೂ, ಅವರ ಸಂಸದೆ ಮಾತ್ರ ಎಲ್ಲೂ ಕಾಣಿಸುತ್ತಿಲ್ಲ. ಅವರನ್ನು ಹುಡುಕಿಕೊಡಿ ಎಂಬ ಒಕ್ಕಣೆಯ ಪೋಸ್ಟರ್ಗಳು ಎಲ್ಲೆಡೆ ಕಂಡುಬರುತ್ತಿವೆ.
ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕಮಲೇಶ್ವರ್ ಪಟೇಲ್, ಮತದಾರರು ಮತ ಹಾಕುವ ಮುನ್ನವೂ ಯೋಚಿಸಬೇಕು ಎನ್ನುವುದು ಇದೀಗ ಖಾತ್ರಿಯಾಗಿದೆ. ಒಂದೆಡೆ ಚುನಾವಣೆಯಲ್ಲಿ ಸೋತ ಮಾಜಿ ಸಿಎಂ ದಿಗ್ವಿಜಯ ಸಿಂಗ್ ಹಗಲು ರಾತ್ರಿ ಶ್ರಮಿಸುತ್ತಿದ್ದರೆ, ಗೆದ್ದ ಜನಪ್ರತಿನಿಧಿ ಸಂಕಷ್ಟದ ಸಂದರ್ಭದಲ್ಲಿ ಜನತೆಯ ಜತೆಯಲ್ಲಿಲ್ಲ. ಪ್ರಜ್ಞಾ ಠಾಕೂರ್ ಆಗಮಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಅವರಿಗೆ ಅವರದ್ದೇ ಆದ ಸರ್ಕಾರ ಇದೆ. ಭಯಪಡುವಂಥದ್ದೇನೂ ಇಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ಸಂಸದೆಯ ಗೈರುಹಾಜರಿಯನ್ನು ಸಮರ್ಥಿಸಿಕೊಂಡಿದ್ದು, ಪ್ರಜ್ಞಾ ಠಾಕೂರ್ ಸದ್ಯ ಕಣ್ಣಿನ ಸಮಸ್ಯೆ ಮತ್ತು ಕ್ಯಾನ್ಸರ್ಗೆ ಎಐಐಎಂಎಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆಯೂ ಅವರ ಪರವಾಗಿ ದಿನಸಿ ಮತ್ತು ಸಮುದಾಯ ಕಿಚನ್ ಮೂಲಕ ಆಹಾರ ವಿತರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ದಿಗ್ವಿಜಯ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದು ರಾಜಕೀಯ ಪ್ರಹಸನ ಎಂದು ಅವರು ಟೀಕಿಸಿದ್ದಾರೆ.