ಬೇಹುಗಾರಿಕೆ : ಇಬ್ಬರು ಪಾಕ್ ರಾಜತಾಂತ್ರಿಕ ಸಿಬ್ಬಂದಿ ಉಚ್ಚಾಟನೆ

ಹೊಸದಿಲ್ಲಿ: ಪಾಕಿಸ್ತಾನ ಹೈಕಮಿಷನ್‌ನ ಮೂವರು ಸಿಬ್ಬಂದಿ ಬೇಹುಗಾರಿಕೆ ಮಾಡುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ವರ್ಗೀಕೃತ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಪಡೆಯ ವಿಶೇಷ ಘಟಕ ಮತ್ತು ಸೇನೆಯ ಗುಪ್ತಚರ ವಿಭಾಗ ತಿಳಿಸಿದೆ.
ಈ ಘಟನೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಲಿದೆ. ಅಬಿದ್ ಹುಸೈನ್, ತಾಹಿರ್ ಖಾನ್ ಹಾಗೂ ಜಾವೇದ್ ಹುಸೈನ್ ಐಎಸ್‌ಐ ಜತೆ ನೇರ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಇಬ್ಬರನ್ನು ವಿದೇಶಾಂಗ ಸಚಿವಾಲಯ ಪಸೋನಾ ನಾನ್ ಗ್ರಾಟಾ ಎಂದು ಘೋಷಿಸಿ ಸೋಮವಾರ ಬೆಳಗ್ಗೆಯೊಳಗೆ ದೇಶ ಬಿಡುವಂತೆ ಸೂಚಿಸಿದೆ. 2016ರಲ್ಲಿ ಕೂಡಾ ಪಾಕಿಸ್ತಾನದ ರಾಜತಾಂತ್ರಿಕ ಸಿಬ್ಬಂದಿಯನ್ನು ಉಚ್ಚಾಟಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ನಡೆಸುತ್ತಿದ್ದ ಚಟುವಟಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಚಾರ್ಜ್ ಡೇ ಅಫೇರ್ಸ್ ವಿಭಾಗಕ್ಕೆ ಭಾರತ ತನ್ನ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಿದೆ. ಕಚೇರಿ ಗೌಪ್ಯ ಕಾಯ್ದೆಯಡಿ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಪಾಕಿಸ್ತಾನ ಈ ಆರೋಪವನ್ನು ಸುಳ್ಳು ಹಾಗೂ ಪುರಾವೆಗಳಿಲ್ಲದ ಆರೋಪ ಎಂದು ತಳ್ಳಿಹಾಕಿದೆ. ರಾಜತಾಂತ್ರಿಕ ಸಿಬ್ಬಂದಿಯನ್ನು ಉಚ್ಚಾಟಿಸಿರುವುದು ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.