ಐಸಿಎಂಆರ್ ಹಿರಿಯ ವಿಜ್ಞಾನಿ, ನೀತಿ ಆಯೋಗದ ಉದ್ಯೋಗಿಗೆ ಕೊರೋನ ಪಾಸಿಟಿವ್

ಹೊಸದಿಲ್ಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‍ನ (ಐಸಿಎಂಆರ್) ಹಿರಿಯ ವಿಜ್ಞಾನಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಮುಂಬೈನ ಈ ಅಧಿಕಾರಿ ಕೆಲ ದಿನಗಳ ಹಿಂದೆ ದಿಲ್ಲಿಗೆ ಆಗಮಿಸಿದ್ದು, ಅವರ ವೈದ್ಯಕೀಯ ವರದಿ ರವಿವಾರ ದೊರೆತಾಗ ಪಾಸಿಟಿವ್ ಆಗಿತ್ತು. ಇದೀಗ ಸಂಪೂರ್ಣ ಐಸಿಎಂಆರ್ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ಕೊರೋನ ಸೋಂಕು ತಗಲಿರುವ ಅಧಿಕಾರಿ ಮುಂಬೈ ಐಸಿಎಂಆರ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ರಿಪ್ರೊಡಕ್ಟಿವ್ ಹೆಲ್ತ್ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿಲ್ಲಿಗೆ ಬಂದ ನಂತರ ಅವರು ಕಳೆದ ವಾರ ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಂ ಭಾರ್ಗವ ಸಹಿತ ಇತರ ಅಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಕೋವಿಡ್-19 ತಂಡ ಹೊರತುಪಡಿಸಿ ಸದ್ಯ ಇತರ ಐಸಿಎಂಆರ್ ಉದ್ಯೋಗಿಗಳಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ನೀತಿ ಆಯೋಗ ಉದ್ಯೋಗಿಗೆ ಕೋವಿಡ್-19
ರಾಜಧಾನಿಯಲ್ಲಿರುವ ನೀತಿ ಆಯೋಗ ಕಚೇರಿಯಲ್ಲಿನ ಒಬ್ಬ ಉದ್ಯೋಗಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟ ನಂತರ ಕಚೇರಿಯ ಮೂರನೇ ಮಹಡಿಯನ್ನು ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ಸೀಲ್ ಮಾಡಲಾಗಿದೆ.
ಕಳೆದ ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇಬ್ಬರು ಅಧಿಕಾರಿಗಳಿಗೆ ಕೋವಿಡ್-19 ದೃಢಪಟ್ಟ ನಂತರ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ಸೀಲ್ ಮಾಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.