4064 ಎಂಬಿಬಿಎಸ್, ಬಿಡಿಎಸ್ ಒಬಿಸಿ ಮೀಸಲು ಸೀಟುಗಳ ಪೈಕಿ ಕೇವಲ 69 ಭರ್ತಿ !
3 ರ್ಷಗಳಲ್ಲಿ 10 ಸಾವಿರ ಸೀಟು ವಂಚಿತರಾದ ಒಬಿಸಿ ವಿದ್ಯಾರ್ಥಿಗಳು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜೂ.1: ಇತರ ಹಿಂದುಳಿದ ವರ್ಗ (ಓಬಿಸಿ)ಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯ ಸೀಟುಗಳು ದೊರೆಯುತ್ತಿಲ್ಲವೆಂದು ಲೋಕಸಭಾ ಸಂಸದರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಕರು, ನ್ಯಾಯ ವಾದಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 300ಕ್ಕೂ ಅಧಿಕ ಮಂದಿ ಗಣ್ಯ ನಾಗರಿಕರು ಆಪಾದಿಸಿದ್ದಾರೆ. ಸೀಟು ವಂಚಿತ ಒಬಿಸಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರಕಿಸಲು ಹೊಸ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಸೀಟುಗಳನ್ನು ಮೀಸಲಿಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ತಮಿಳುನಾಡು ಕಾಂಗ್ರೆಸ್ ನಾಯಕ ಎಸ್.ಜ್ಯೋತಿಮಣಿ ಈ ಹೇಳಿಕೆಗೆ ಸಹಿಹಾಕಿದ್ದಾರೆ. ಖಾಸಗಿ ಹಾಗೂ ಸರಕಾರಿ ಕಾಲೇಜುಗಳು ಅಖಿಲ ಭಾರತ ಕೋಟಾ (ಎಐಕ್ಯೂ) ವ್ಯವಸ್ಥೆಯಡಿ ಪದವಿ ಕೋರ್ಸ್ಗಳಲ್ಲಿ ಶೇ.15 ಸೀಟುಗಳನ್ನು ಹಾಗೂ ಸ್ನಾತಕೋತ್ತರ ಕೋರ್ಸ್ಗಳಲ್ಲಿ, ಶೇ.50 ಸೀಟುಗಳನ್ನು ಮೀಸಲಿಡಬೇಕಾಗಿದೆ. ಆದರೆ ಈ ಕಾಲೇಜುಗಳು ಓಬಿಸಿ ಕೋಟಾದಡಿಯಲ್ಲಿ ಕೆಲವೇ ಕೆಲವು ಸೀಟುಗಳನ್ನು ಮಾತ್ರ ಮೀಸಲಿಡುತ್ತಿವೆಯೆಂದು ಅವರು ಆಪಾದಿಸಿದ್ದಾರೆ.
2017-18ರ ಸಾಲಿನಲ್ಲಿ ಒಟ್ಟು 4064 ಎಂಬಿಬಿಎಸ್ ಹಾಗೂ ಬಿಡಿಎಸ್ ಸೀಟುಗಳ ಪೈಕಿ ಕೇವಲ 69 ಸೀಟುಗಳನ್ನು (1.7 ಶೇಕಡ) ಓಬಿಸಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಪ್ರವೇಶ ಮೀಸಲಾತಿ) ಕಾಯ್ದೆ, 2006ರ ಪ್ರಕಾರ ಓಬಿಸಿ ಅಭ್ಯರ್ಥಿಗಳಿಗೆ ಶೇ.27ರಷ್ಟು ಅಂದರೆ 1097 ಸೀಟುಗಳು ಮೀಸಲಿಡಬೇಕಾಗಿದೆ ಎಂದ ಹೇಳಿಕೆ ತಿಳಿಸಿದೆ.
‘‘ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ಗಳ 7982 ಸೀಟುಗಳ ಪೈಕಿ 2152 ಸೀಟುಗಳನ್ನು ಓಬಿಸಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಆದರೆ 2018-19ರ ಶೈಕ್ಷಣಿಕ ವರ್ಷದಲ್ಲಿ ಕೇವಲ 220 ಓಬಿಸಿ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ದೊರೆತಿದೆ. ಕಳೆದ ಮೂರು ವರ್ಷಗಳಲ್ಲಿ 10 ಸಾವಿರ ವೈದ್ಯಕೀಯ ಸೀಟುಗಳನ್ನು ಓಬಿಸಿ ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆಂದು” ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಖಿಲ ಭಾರತ ಕೋಟಾದಲ್ಲಿ 4061 ಎಂಬಿಬಿಎಸ್ ಸೀಟುಗಳಿದ್ದು, ಆ ಪೈಕಿ ಶೇ.27ರಷ್ಟು ಅಂದರೆ 1096 ಸೀಟುಗಳನ್ನು ಓಬಿಸಿ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕಾಗಿದೆ ಎಂದು ಹೇಳಿಕೆಗೆ ಸಹಿಹಾಕಿದವರು ಪತ್ರದಲ್ಲಿ ತಿಳಿಸಿದ್ದಾರೆ.
2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಓಬಿಸಿ ವಿದ್ಯಾರ್ಥಿಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನೀಡಬೇಕು ಹಾಗೂ ಕಳೆದ ಸಾಲಿನಲ್ಲಿ ಸೀಟು ವಂಚಿತ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಕ್ಕಾಗಿ ಹೆಚ್ಚುವರಿ ಸೀಟುಗಳನ್ನು ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.