ಕೆಲವು ವಲಸೆ ಕಾರ್ಮಿಕರು ತಾಳ್ಮೆ ಕಳೆದುಕೊಂಡು ಕಾಲ್ನಡಿಗೆಯಲ್ಲಿ ಹೊರಟರು ಎಂದ ಅಮಿತ್ ಶಾ
ಹೊಸದಿಲ್ಲಿ: ವಲಸಿಗ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಕೇಂದ್ರ ಸರಕಾರ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಕೆಲವರು ತಾಳ್ಮೆ ಕಳೆದುಕೊಂಡು ಲಾಕ್ಡೌನ್ ಹೊರತಾಗಿಯೂ ನಡೆದುಕೊಂಡು ಹೊರಟರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಆಂಗ್ಲ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, “ನಾವು ಬಸ್ಗಳ ಏರ್ಪಾಟು ಮಾಡಿ ಅವರನ್ನು ರೈಲ್ವೆ ನಿಲ್ದಾಣಗಳಿಗೆ ತಲುಪಿಸಿದೆವು. ಅಲ್ಲಿಂದ ಅವರು ತಮ್ಮ ಗ್ರಾಮಗಳಿಗೆ ತೆರಳಿದರು'' ಎಂದು ಹೇಳಿದರು.
ಹಲವಾರು ಜನರು ತೊಂದರೆ ಎದುರಿಸುವಂತಾಯಿತು ಎಂಬುದನ್ನು ಒಪ್ಪಿಕೊಂಡ ಅಮಿತ್ ಶಾ, “ಐದಾರು ದಿನಗಳಲ್ಲಿ ಕೆಲ ಅಹಿತಕರ ಘಟನೆಗಳೂ ನಡೆದವು'' ಎಂದರು. “ಸರಕಾರ ವಲಸಿಗ ಕಾರ್ಮಿಕರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದೆ. ಇದರಿಂದಾಗಿಯೇ ಒಂದು ಕೋಟಿಗೂ ಅಧಿಕ ಕಾರ್ಮಿಕರು ಮನೆಗಳನ್ನು ತಲುಪಿದ್ದಾರೆ,'' ಎಂದರು.
ಕೇಂದ್ರ ಸರಕಾರ ವಲಸಿಗ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಏರ್ಪಾಟು ಮಾಡಲು ರಾಜ್ಯ ಸರಕಾರಗಳಿಗೆ ರೂ 11,000 ಕೋಟಿ ಬಿಡುಗಡೆಗೊಳಿಸಿದೆ ಎಂದು ಹೇಳಿದ ಅವರು, 41 ಲಕ್ಷ ವಲಸಿಗ ಕಾರ್ಮಿಕರನ್ನು ಬಸ್ಗಳಲ್ಲಿ ಹಾಗೂ 55 ಲಕ್ಷ ಮಂದಿಯನ್ನು ರೈಲುಗಳಲ್ಲಿ ಕಳುಹಿಸಲಾಯಿತು ಎಂದು ಹೇಳಿದರು.
ದೇಶಾದ್ಯಂತ ಲಾಕ್ ಡೌನ್ ವಿಧಿಸಲು ಕೇವಲ ನಾಲ್ಕು ಗಂಟೆಗಳಿಗೆ ಮುಂಚಿತವಾಗಿ ತಿಳಿಸಿರುವುದು ಕಡಿಮೆಯಾಯಿತೇ ಹಾಗೂ ಅದಕ್ಕಿಂತ ಮುಂಚೆಯೇ ಕಾರ್ಮಿಕರನ್ನು ಊರಿಗೆ ತಲುಪಿಸಬೇಕಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಾದರೂ ಮಾಡಿದ್ದರೆ ಕಾಲ್ಕುಳಿತಗಳು ಸಂಭವಿಸುತ್ತಿದ್ದವು ಎಂದರು.