ಲಾಕ್ ಡೌನ್ ಕಡಿಮೆಗೊಳಿಸಿದ್ದು ಕೊರೋನವನ್ನಲ್ಲ, ಜಿಡಿಪಿಯನ್ನು: ರಾಜೀವ್ ಬಜಾಜ್
ಹೊಸದಿಲ್ಲಿ: ದೇಶದಲ್ಲಿ ಕೊರೋನವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೇರಲಾದ ‘ಕಠಿಣ ಲಾಕ್‍ಡೌನ್’ ದೇಶವನ್ನು ಕೆಟ್ಟ ಸ್ಥಿತಿಯಲ್ಲಿ ತಂದು ನಿಲ್ಲಿಸಿರುವ ಜತೆಗೆ ಸಮಸ್ಯೆಯನ್ನು ನಿಭಾಯಿಸಲು ವಿಫಲವಾಗಿದೆ ಎಂದು ಉದ್ಯಮಿ ರಾಜೀವ್ ಬಜಾಜ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜತೆ ನಡೆಸಿರುವ ವೀಡಿಯೋ ಸಂವಾದದಲ್ಲಿ ಹೇಳಿದ್ದಾರೆ.
“ನಾವು ಕಠಿಣ ಲಾಕ್‍ಡೌನ್ ಒಂದನ್ನು ಜಾರಿಗೆ ತರಲು ಯತ್ನಿಸಿದೆವು. ಆದರೂ ಅದರಲ್ಲಿ ಲೋಪಗಳಿದ್ದವು. ಲೋಪಯುಕ್ತ ಲಾಕ್‍ಡೌನ್‍ನಿಂದಾಗಿ ವೈರಸ್ ಇನ್ನೂ ಅಸ್ತಿತ್ವದಲ್ಲಿರುತ್ತದೆ ಹಾಗೂ ನೀವು ಹೇಳಿದಂತೆ ಅನ್‍ಲಾಕ್ ಜಾರಿಯಾಗುವಾಗ ಅದು ನಿಮ್ಮನ್ನು ಅಪ್ಪಳಿಸಲು ಕಾಯುತ್ತಿದೆ. ಆದುದರಿಂದ ನೀವು ಆ ಸಮಸ್ಯೆ ಪರಿಹರಿಸಿಲ್ಲ'' ಎಂದು ಬಜಾಜ್ ಆಟೋ ಆಡಳಿತ ನಿರ್ದೇಶಕರಾಗಿರುವ ರಾಜೀವ್ ಬಜಾಜ್ ಹೇಳಿದರು.
“ಆದರೆ ನೀವು ಖಂಡಿತವಾಗಿಯೂ ಆರ್ಥಿಕತೆಯನ್ನು ಚೂರು ಚೂರು ಮಾಡಿದ್ದೀರಿ. ನೀವು ತಪ್ಪಾದ ಕರ್ವ್ ಅನ್ನು ಚಪ್ಪಟೆಗೊಳಿಸಿದ್ದೀರಿ. ಅದು ಸೋಂಕಿನ ಕರ್ವ್ ಅಲ್ಲ, ಜಿಡಿಪಿ ಕರ್ವ್. ಇದೇ ಈಗ ನಮ್ಮ ಮುಂದಿದೆ. ವರ್ಸ್ಟ್ ಆಫ್ ಬೋತ್ ವರ್ಲ್ಡ್ಸ್” ಎಂದು ಅವರು ಹೇಳಿದ್ದಾರೆ.
ಬಜಾಜ್ ಅವರು ಕೇಳಿದ ಒಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, “ಲಾಕ್‍ಡೌನ್ ಸಾವಿನ ಭಯವನ್ನು ಜನರ ಮನಸ್ಸಿನಲ್ಲಿ ತರುತ್ತದೆ ಎಂದು ಯಾರೋ ನನಗೆ ಹೇಳಿದ್ದರು. ಈ ಭಯವನ್ನು ಹೋಗಲಾಡಿಸುವುದು ಕಷ್ಟ'' ಎಂದರು.
“ಭಾರತದಲ್ಲಿ ಹೂಡಿಕೆ ಮಾಡುವ ಯಾರೇ ಆದರೂ ನಿಮ್ಮ ವರ್ಚಸ್ಸು ನೋಡಿ ಹೂಡಿಕೆ ಮಾಡುವುದಿಲ್ಲ. ನೀವು ಯಾರು ಹಾಗೂ ನಿಮ್ಮಲ್ಲಿ ಏನು ಇದೆ ಎಂದು ನೋಡಿ ಹೂಡಿಕೆ ಮಾಡುತ್ತಾರೆ, ನಿಮ್ಮಲ್ಲಿ ಆರ್ಥಿಕತೆಯೇ ಇಲ್ಲದಿದ್ದರೆ ಏನೂ ಇಲ್ಲ'' ಎಂದೂ ಅವರು ಹೇಳಿದರು.
ರಾಹುಲ್ ಈ ಹಿಂದೆ ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಜತೆ ಇದೇ ರೀತಿ ಸಂವಾದ ನಡೆಸಿದ್ದರು.