ಡಾ. ಸೂಫಿ ಅನ್ವರ್‌ಗೆ ಯುಕೆಯ ಎಚ್‌ಇಎಯಿಂದ ಸೀನಿಯರ್ ಫೆಲೋಶಿಪ್

ಮಂಗಳೂರು, ಜೂ. 4: ಯುಎಇ ಕ್ಯಾಂಪಸ್‌ನ ಸ್ಟಿರ್ಲಿಂಗ್ ಆರ್‌ಎಕೆ ವಿಶ್ವವಿದ್ಯಾಲಯದ ಅಕಾಡೆಮಿಕ್ಸ್ ನಿರ್ದೇಶಕ ಡಾ. ಸೂಫಿ ಅನ್ವರ್‌ರವರು ಯುಕೆಯ ಉನ್ನತ ಶಿಕ್ಷಣ ಅಕಾಡೆಮಿ (ಎಚ್‌ಇಎ)ಯಿಂದ ಸೀನಿಯರ್ ಫೆಲೋಶಿಪ್- ಪ್ರತಿಷ್ಠಿತ ವೃತ್ತಿಪರ ಮಾನ್ಯತೆಯನ್ನು ಪಡೆದಿದ್ದಾರೆ.
ಯುಕೆಯ ಸ್ಕಾಟ್ಲೆಂಡ್, ಸ್ಟಿರ್ಲಿಂಗ್ ವಿಶ್ವವಿದ್ಯಾಲಯದಲ್ಲಿ ಕಲಿಕೆ ಮತ್ತು ಬೋಧನೆಗಾಗಿ ಮುಂದುವರಿದ ವೃತ್ತಿಪರ ಅಭಿವೃದ್ಧಿ ಚೌಕಟ್ಟು (ಸಿಪಿಡಿ), ಸ್ಟಿರ್ಲಿಂಗ್ ಫ್ರೇಮ್‌ವರ್ಕ್ ಫಾರ್ ಎವಿಡೆನ್ಸಿಂಗ್ ಲರ್ನಿಂಗ್ ಅಂಡ್ ಟೀಚಿಂಗ್ ಎನ್‌ಹಾನ್ಸ್‌ಮೆಂಟ್ (ಎಸ್‌ಎಫ್ ಇಎಲ್‌ಟಿಇ) ಮೂಲಕ ಅವರು ಈ ಸಾಧನೆಯನ್ನು ಮಾಡಿದ್ದಾರೆ. ಇತ್ತೀಚೆಗೆ ಯುಕೆಯ ಯುನಿವರ್ಸಿಟಿ ಆಫ್ ಸ್ಟಿರ್ಲಿಂಗ್ ಕ್ಯಾಂಪಸ್‌ನಲ್ಲಿ ಮುಕ್ತಾಯಗೊಂಡ ಲರ್ನಿಂಗ್ ಆ್ಯಂಡ್ ಟೀಚಿಂಗ್ ಕಾನ್ಫರೆನ್ಸ್ - 2020ರಲ್ಲಿ ಡಾ. ಸೂಫಿ ಅನ್ವರ್‌ರವರ ಈ ಸಾಧನೆಯನ್ನು ಗುರುತಿಸಲಾಯಿತು. ಅವರು ಮೆಕ್ಸಿಕೊದ ಅಜ್ಟೆಕಾ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಬೋಧನೆ ಹಾಗೂ ಉನ್ನತ ಶಿಕ್ಷಣ ಮಟ್ಟದ ಆಡಳಿತ ನಾಯಕತ್ವದಲ್ಲಿ 20 ವರ್ಷಗಳ ಅನುಭವ ಹೊಂದಿರುವ ಡಾ. ಸೂಫಿ ಅನ್ವರ್‌ರವರು, ಯುಎಇ, ಬಹರೇನ್ ಮತ್ತು ಭಾರತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಶೈಕ್ಷಣಿಕ ಉತ್ಕೃಷ್ಟತೆ, ಉ್ನನತ ಶಿಕ್ಷಣದಲ್ಲಿನ ಮಾದರಿ ನಾಯಕತ್ವವನ್ನು ಗುರುತಿಸಿ ಅವರಿಗೆ ಅತ್ಯುತ್ತಮ ಪ್ರಾಧ್ಯಾಪಕರಾಗಿ ಪ್ರತಿಷ್ಠಿತ ಮಧ್ಯಪ್ರಾಚ್ಯ ಶಿಕ್ಷಣ ನಾಯಕತ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಅವರು 1999ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಿಸ್ನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದಿಂದ ಎಂಬಿಎ ಮತ್ತು ಮಂಗಳೂರು ಕೆನರಾ ಕಾಲೇಜಿನಿಂದ ಬಿಕಾಂ ಪದವಿ ಪಡೆದಿದ್ದಾರೆ. ಅವರು ಹಾಜಿ ಅಬ್ದುಲ್ ಖಾದರ್ ಕೋಡಿಜಾಲ್ ಮತ್ತು ಮರಿಯಮ್ಮ ದಂಪತಿ ಪುತ್ರ.







