`ಮಿತ್ರೋನ್' ಆ್ಯಪ್ ತಕ್ಷಣ ಅನ್‍ಇನ್ ಸ್ಟಾಲ್ ಮಾಡಿ: ಮಹಾರಾಷ್ಟ್ರ ಸೈಬರ್ ಸೆಲ್ ಸೂಚನೆ
ಮುಂಬೈ: ಇತ್ತೀಚೆಗೆ ಗೂಗಲ್ ಪ್ಲೇ ಸ್ಟೋರ್‍ನಿಂದ ಹೊರ ಹಾಕಲ್ಪಟ್ಟ ‘ಮಿತ್ರೋನ್’ ಆ್ಯಪ್ ಅನ್ನು ಅದಾಗಲೇ ಡೌನ್‍ಲೋಡ್ ಮಾಡಿರುವವರಿಗೆ ಮಹಾರಾಷ್ಟ್ರ ಸೈಬರ್ ಸೆಲ್ ಎಚ್ಚರಿಕೆ ನೀಡಿದೆ ಹಾಗೂ ಆ್ಯಪ್ ಅನ್ನು ತಕ್ಷಣ ಅನ್-ಇನ್‍ಸ್ಟಾಲ್ ಮಾಡುವಂತೆ ತಿಳಿಸಿದೆ.
ಈ ಕುರಿತಂತೆ ಟ್ವಿಟರ್‍ನಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಸೈಬರ್ ಘಟಕ, ಈ ಮಿತ್ರೋನ್ ಆ್ಯಪ್ ಈ ಹಿಂದೆ ಹೇಳಿದಂತೆ ಭಾರತೀಯ ಆ್ಯಪ್ ಅಲ್ಲ, ಹಾಗೂ ಅದನ್ನು ಡೌನ್‍ಲೋಡ್ ಮಾಡಿದವರ ಖಾತೆಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಅದರಲ್ಲ್ಲಿ ಬರೆಯಲಾಗಿದೆ.
ಗೂಗಲ್ ಈ ಆ್ಯಪ್ ಅನ್ನು ತೆಗೆದುಹಾಕುವ ಮೊದಲು ಅದನ್ನು 50 ಲಕ್ಷ ಜನರು ಡೌನ್‍ಲೋಡ್ ಮಾಡಿದ್ದರು. ಆದರೆ ಈ ಆ್ಯಪ್ ಲಾಗಿನ್ ಪ್ರಕ್ರಿಯೆ ಸುರಕ್ಷಿತವಲ್ಲ ಎಂದು ಹೇಳಲಾಗಿದೆ. ಯೂಸರ್ ಐಡಿ ತಿಳಿದಿದ್ದರೆ ಸಾಕು ಯಾವುದೇ ಮಿತ್ರೋನ್ ಖಾತೆಗೆ ಪಾಸ್‍ವರ್ಡ್ ಇಲ್ಲದೆಯೇ ಲಾಗಿನ್ ಆಗಬಹುದಾಗಿದೆ, ಜತೆಗೆ ಈ ಆ್ಯಪ್ ಲಾಗಿನ್‍ಗಾಗಿ ಸೆಕ್ಯೂರ್ ಸಾಕೆಟ್ಸ್ ಲೇಯರ್ (ಎಸ್‍ಎಸ್‍ಎಲ್) ಬಳಸಲಾಗುತ್ತಿಲ್ಲ. ಇದರಿಂದಾಗಿ ಹ್ಯಾಕರ್‍ಗಳು ಇದನ್ನು ಬಳಸಿ ಖಾತೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಇತರರಿಗೆ ಸಂದೇಶ ಕಳುಹಿಸಬಹುದು, ಇತರರನ್ನು ಫಾಲೋ ಮಾಡಬಹುದು ಹಾಗೂ ಖಾತೆದಾರರ ಪರವಾಗಿ ಕಮೆಂಟ್ ಕೂಡ ಮಾಡಬಹುದಾಗಿದೆ.
ಇದು ಟಿಕ್ ಟಾಕ್‍ಗೆ ಸ್ವದೇಶಿ ಪರ್ಯಾಯ ಎಂದು ಮೊದಲು ಬಣ್ಣಿಸಲಾಗಿತ್ತು . ಆದರೆ ಇದನ್ನು ಪಾಕಿಸ್ತಾನದ ಕ್ಯೂಬಾಕ್ಸಸ್ ಎಂಬ ಡೆವಲೆಪರ್ ತಯಾರಿಸಿದ್ದೆನ್ನಲಾಗಿದ್ದು, ಅದನ್ನು ನಂತರ ಒಬ್ಬ ಐಐಟಿ ವಿದ್ಯಾರ್ಥಿಗೆ ಮಾರಾಟ ಮಾಡಲಾಗಿತ್ತೆನ್ನಲಾಗಿದೆ. ಆದರೆ ಈ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ.