ಅಂತರ್ರಾಜ್ಯ ಪ್ರಯಾಣದ ಬಗ್ಗೆ ವಾರದೊಳಗೆ ನಿರ್ಧರಿಸಿ: ದಿಲ್ಲಿ, ಹರ್ಯಾಣ, ಉ.ಪ್ರದೇಶಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಜೂ.4: ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅಂತರ್ರಾಜ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಒಂದು ವಾರದೊಳಗೆ ನಿರ್ಧರಿಸುವಂತೆ ಸುಪ್ರೀಂಕೋರ್ಟ್ ದಿಲ್ಲಿ, ಹರ್ಯಾಣ ಮತ್ತು ಉತ್ತರಪ್ರದೇಶಗಳಿಗೆ ಸೂಚಿಸಿದೆ. ಅಲ್ಲದೆ ಮೂರು ರಾಜ್ಯಗಳ ಗಡಿಭಾಗದಲ್ಲಿ ಸಂಚಾರಕ್ಕೆ ಸಂಬಂಧಿಸಿ ಇರುವ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಮೂರೂ ರಾಜ್ಯಗಳ ಅಧಿಕಾರಿಗಳ ಸಭೆ ಕರೆಯುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಉತ್ತರಪ್ರದೇಶ ಮತ್ತು ಹರ್ಯಾನ ರಾಜ್ಯಗಳು ದಿಲ್ಲಿಯೊಂದಿಗಿನ ಗಡಿಯನ್ನು ಸೀಲ್ ಮಾಡಿರುವುದರಿಂದ ಸಂವಿಧಾನದ 19ನೇ ಅನುಚ್ಛೇದದಡಿ ನೀಡಲಾಗಿರುವ ಪ್ರಯಾಣದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಗುರುಗ್ರಾಮದ ನಿವಾಸಿ ರೋಹಿತ್ ಭಲ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾಯಪೀಠ ಈ ಸೂಚನೆ ನೀಡಿದೆ. ನ್ಯಾಯಾಧೀಶರಾದ ಅಶೋಕ್ ಭೂಷಣ್, ಎಸ್ಕೆ ಕೌಲ್ ಮತ್ತು ಎಂಆರ್ ಶಾ ಪೀಠದ ಸದಸ್ಯರಾಗಿದ್ದಾರೆ.
ಜೂನ್ 1ರಿಂದ ಮೂರೂ ರಾಜ್ಯಗಳೂ ಲಾಕ್ಡೌನ್ನಲ್ಲಿ ಹಲವು ಸಡಿಲಿಕೆ ಮಾಡಿದ್ದರೂ ಅಂತರ್ರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಉತ್ತರಪ್ರದೇಶದ ನೋಯ್ಡೆದಲ್ಲಿ ದಿಲ್ಲಿಯನ್ನು ತಲುಪುವ ಎಲ್ಲಾ ಮಾರ್ಗಗಳನ್ನೂ ಎಪ್ರಿಲ್ 1ರಿಂದ ಮುಚ್ಚಲಾಗಿದೆ. ಹರ್ಯಾನ ಸರಕಾರವೂ ಅಗತ್ಯ ಸೇವೆಗಳಿಗೆ ಹೊರತುಪಡಿಸಿ, ದಿಲ್ಲಿಯೊಂದಿಗಿನ ಗಡಿಯನ್ನು ಮುಚ್ಚಿದೆ.