ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವಿಕೆ ನಿರ್ಧಾರವಾಗಿಲ್ಲ: ಆಯುಷ್ ಇಲಾಖೆ
ಹೊಸದಿಲ್ಲಿ, ಜೂ.6: ಜೂನ್ 21ರಂದು ಲೇಹ್ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಆಯುಷ್ ಇಲಾಖೆ ಹೇಳಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮೋದಿ ಲೇಹ್ಗೆ ಪ್ರಯಾಣಿಸುವ ಸಾಧ್ಯತೆ ಕಡಿಮೆ ಎಂದು ಇಲಾಖೆ ತಿಳಿಸಿದೆ.
ಲಡಾಖ್ನ ಲೇಹ್ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಆತಿಥ್ಯ ವಹಿಸಲಿದೆ ಮತ್ತು ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದು ಕಳೆದ ಮಾರ್ಚ್ನಲ್ಲಿ ಆಯುಷ್ ಇಲಾಖೆಯ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಪ್ರಧಾನಿ ಲೇಹ್ಗೆ ಹೋಗುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಲೇಹ್ನಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮ ಬೃಹತ್ ಕಾರ್ಯಕ್ರಮವಾಗಿದೆ. ಈ ಬಾರಿಯ ಯೋಗ ದಿನವನ್ನು ಡಿಜಿಟಲ್ ಮಾಧ್ಯಮದ ವೇದಿಕೆಯಲ್ಲಿ ಆಚರಿಸಲಾಗುವುದು ಆಯುಷ್ ಇಲಾಖೆಯ ಕಾರ್ಯದರ್ಶಿ ವಿ ರಾಜೇಶ್ ಕೊಟೇಚ ಹೇಳಿದ್ದಾರೆ.
ಮನೆಯಲ್ಲೇ ಯೋಗ ಮತ್ತು ಕುಟುಂಬದೊಂದಿಗೆ ಯೋಗ ಎಂಬುದು ಈ ಬಾರಿಯ ಯೋಗ ದಿನಾಚರಣೆಯ ವಿಷಯವಾಗಿದೆ. ಜೂನ್ 21ರಂದು ಬೆಳಿಗ್ಗೆ 7ಗಂಟೆಗೆ ನಡೆಯುವ ವರ್ಚುವಲ್ ಯೋಗ ದಿನಾಚರಣೆಯಲ್ಲಿ ಜನತೆ ಪಾಲ್ಗೊಳ್ಳಬಹುದು ಎಂದವರು ಹೇಳಿದ್ದಾರೆ.