ಎಟಿಎಂ ಯಂತ್ರ ಸ್ಪರ್ಶಿಸದೇ 25 ಸೆಕೆಂಡ್‌ನಲ್ಲಿ ಹಣ ಪಡೆಯುವುದು ಹೇಗೆ ಗೊತ್ತೇ?
ಹೊಸದಿಲ್ಲಿ, ಜೂ.7: ಕೊರೋನ ವೈರಸ್ ಸೋಂಕಿನಿಂದ ಗ್ರಾಹಕರಿಗೆ ಸುರಕ್ಷೆ ಒದಗಿಸಲು ಬ್ಯಾಂಕ್‌ಗಳು ಶ್ರಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳ ದೊಡ್ಡ ಬ್ಯಾಂಕ್‌ಗಳು ಕಾಂಟ್ಯಾಕ್ಟ್‌ಲೆಸ್ ಎಟಿಎಂ ಯಂತ್ರಗಳನ್ನು ಸಿದ್ಧಪಡಿಸುತ್ತಿವೆ.
ಎಟಿಎಂ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಜಿಎಸ್ ಟ್ರಾಸ್ಯಾಕ್ಟ್ ಟೆಕ್ನಾಲಜಿ, ಇಂಥ ಹೊಸ ಯಂತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದರಲ್ಲಿ ನೀವು ನಿಮ್ಮ ಮೊಬೈಲ್ ಆ್ಯಪ್ ಮೂಲಕ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಹಣವನ್ನು ಪಡೆಯಬಹುದಾಗಿದೆ.
ಸದ್ಯ ಎಟಿಎಂ ಕಾರ್ಡ್‌ಗಳಲ್ಲಿರುವ ಮೆಜೆಂಟ್ ಪಟ್ಟಿಯು ಗ್ರಾಹಕರ ಸಮಗ್ರ ಡಾಟಾವನ್ನು ಒಳಗೊಂಡಿರುತ್ತದೆ. ಈ ಎಟಿಎಂ ಯಂತ್ರ ನೀವು ಪಿನ್ ನಂಬರ್ ದಾಖಲಿಸಿದ ತಕ್ಷಣ ಡಾಟಾ ಪರಿಶೀಲಿಸುತ್ತದೆ. ಬಳಿಕ ಗ್ರಾಹಕರು ಹಣ ಪಡೆಯಲು ಅನುವು ಮಾಡಿಕೊಡುತ್ತದೆ.
ಇದೀಗ ಬ್ಯಾಂಕ್‌ಗಳು ಸುಸಜ್ಜಿತ ಎಟಿಎಂ ಯಂತ್ರಗಳನ್ನು ಪರಿಚಯಿಸುತ್ತಿವೆ. ಇದರಲ್ಲಿ ಗ್ರಾಹಕರು ಎಟಿಎಂ ಯಂತ್ರವನ್ನು ಸ್ಪರ್ಶಿಸುವುದಿಲ್ಲ. ಯಾವುದೇ ಸ್ಪರ್ಶವಿಲ್ಲದೇ ಗ್ರಾಹಕರು ತಮ್ಮ ಮೊಬೈಲ್ ಫೋನ್ ಮೂಲಕವೇ ಹಣ ಪಡೆಯಬಹುದು. ಇದಕ್ಕಾಗಿ ಎಟಿಎಂ ಯಂತ್ರದಲ್ಲಿ ನೀಡಲಾದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬಳಿಕ ಪಡೆಯಲು ಬಯಸುವ ಮೊತ್ತವನ್ನು ಮೊಬೈಲ್‌ನಲ್ಲಿ ನಮೂದಿಸಬೇಕು. ಆಗ ಎಟಿಎಂನಿಂದ ಹಣ ಬಿಡುಗಡೆಯಾಗುತ್ತದೆ.
ಕ್ಯೂಆರ್ ಕೋಡ್ ಮೂಲಕ ಹಣ ಪಡೆಯುವುದು ಅತ್ಯಂತ ಸುರಕ್ಷಿತ ಹಾಗೂ ಸುಲಭ ವಿಧಾನ. ಇದರಲ್ಲಿ ಕಾರ್ಡ್ ಕ್ಲೋನಿಂಗ್ ಅಪಾಯವೂ ಇಲ್ಲ ಎನ್ನುವುದು ಮಹೇಶ್ ಪಟೇಲ್ ಅವರ ಅಭಿಪ್ರಾಯ. ಕೇವಲ 25 ಸೆಕೆಂಡ್‌ಗಳಲ್ಲಿ ನೀವು ಹಣ ಪಡೆಯಬಹುದಾಗಿದೆ ಎಂದು ಅವರು ವಿವರಿಸುತ್ತಾರೆ.
ಕೊರೋನ ವೈರಸ್ ಕಾರಣದಿಂದ ಭೌತಿಕ ಅಂತರ ಅಗತ್ಯ. ಸಾಕಷ್ಟು ನೈರ್ಮಲ್ಯ ಮತ್ತು ಜಾಗೃತಿ ಇಲ್ಲದಿದ್ದರೆ, ಎಟಿಎಂ ಮೆಷಿನ್ ಮೂಲಕವೂ ಸೋಂಕು ಹರಡಬಹುದು ಎಂದು ಅವರು ಎಚ್ಚರಿಸುತ್ತಾರೆ. ಈ ದಿಸೆಯಲ್ಲಿ ಸಂಪರ್ಕ ರಹಿತ ಎಟಿಎಂ ಯಂತ್ರಗಳು ಹೆಚ್ಚು ಪ್ರಯೋಜನಕಾರಿ.