ಕರ್ಣಾಟಕ ಬ್ಯಾಂಕ್ ಗೆ ನಾಲ್ಕು ಸಾಲ ಖಾತೆಗಳಲ್ಲಿ 285 ಕೋಟಿ ರೂ. ವಂಚನೆ

ಹೊಸದಿಲ್ಲಿ: ಡಿಎಚ್‍ಎಫ್‍ಎಲ್ ಸೇರಿದಂತೆ ನಾಲ್ಕು ಸಾಲ ಖಾತೆಗಳಲ್ಲಿ 285 ಕೋಟಿ ರೂಪಾಯಿ ವಂಚನೆಯಾಗಿರುವುದನ್ನು ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ RBIಗೆ ವರದಿ ಮಾಡಿದೆ.
ಒಟ್ಟು 285.2 ಕೋಟಿ ರೂಪಾಯಿಗಳನ್ನು ವಂಚನೆ ಮೊತ್ತ ಎಂದು ವರದಿ ಮಾಡಲಾಗಿದ್ದು, ದಿವಾನ್ ಫೈನಾನ್ಸ್ ಹೌಸಿಂಗ್ ಲಿಮಿಟೆಡ್, ರೆಲಿಗೇರ್ ಫಿನ್ವೆಸ್ಟ್, ಫೆಡ್ಡೆರಸ್ ಎಲೆಕ್ಟ್ರಿಕ್ ಆ್ಯಂಡ್ ಎಂಜಿನಿಯರಿಂಗ್ ಲಿಮಿಟೆಡ್ ಮತ್ತು ಲೀಲ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್‍ಗೆ 2009ರಿಂದ 2014ರವರೆಗೆ ಸಾಂಸ್ಥಿಕ ನೆರವು ನೀಡಿದ್ದನ್ನು ಹೇಳಿಕೆ ಸಲ್ಲಿಕೆಯಲ್ಲಿ ಉಲ್ಲೇಖಿಸಿದೆ.
ಡಿಎಚ್‍ಎಫ್‍ಎಲ್‍ನಿಂದ ಗರಿಷ್ಠ ಅಂದರೆ 180.13 ಕೋಟಿ ರೂಪಾಯಿ ಬಾಕಿ ಇದ್ದು, ರೆಲಿಗೇರ್ಸ್ ನಿಂದ 43.44 ಕೋಟಿ, ಫೆಡ್ಡೆರಸ್ ಎಲೆಕ್ಟ್ರಿಕ್ಸ್ ನಿಂದ 41.30 ಕೋಟಿ ಹಾಗೂ ಲೀಲ್ ಎಲೆಕ್ಟ್ರಿಕಲ್ಸ್ ನಿಂದ 20.65 ಕೋಟಿ ರೂಪಾಯಿ ಸುಸ್ತಿಸಾಲ ಇದೆ.
ಡಿಎಚ್‍ಎಫ್‍ಎಲ್ 2014 ಬಳಿಕ ನಮ್ಮ ಬ್ಯಾಂಕ್ ಸದಸ್ಯನಾಗಿರುವ ಸಮೂಹದಿಂದ ವಿವಿಧ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದು, 2019ರ ನವೆಂಬರ್‍ನಲ್ಲಿ ಇದನ್ನು ಕೆಂಪುಪಟ್ಟಿಗೆ ಸೇರಿಸಲಾಗಿದೆ. 2019ರ ಅಕ್ಟೋಬರ್ 30ರಂದು ಇದನ್ನು ಅನುತ್ಪಾದಕ ಆಸ್ತಿ ಎಂದು ಪರಿಗಣಿಸಲಾಗಿದೆ. ಇದೀಗ ಕಂಪನಿಗೆ ನೀಡಿರುವ ಸಾಲದ ದುರ್ಬಳಕೆ, ವಿಶ್ವಾಸಘಾತುಕತನ ಹಾಗೂ ನಿಧಿ ವರ್ಗಾವಣೆ ಪ್ರಮಾಣ 180.13 ಕೋಟಿ ರೂಪಾಯಿ ಆಗಿದೆ ಎಂದು ಬ್ಯಾಂಕ್ ಹೇಳಿದೆ. ಅಂತೆಯೇ ಇತರ ಮೂರು ಕಂಪನಿಗಳು ವಂಚಿಸಿರುವುದನ್ನೂ ಉಲ್ಲೇಖಿಸಲಾಗಿದೆ.







