ರೈತರಿಂದ ಬಿಪಿಎಲ್ ಕಾರ್ಡ್ ವಾಪಸ್ ಪಡೆಯಲು ಬಿಡಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು, ಜೂ.7: ಟ್ರ್ಯಾಕ್ಟರ್ ಹೊಂದಿರುವ ರೈತರು ಬಿಪಿಎಲ್ ಕಾರ್ಡ್ ವಾಪಸ್ ಕೊಡಬೇಕು ಎಂಬ ಸರಕಾರದ ನಿರ್ಧಾರ ಸರಿಯಲ್ಲ. ಎರಡು ಎಕರೆ ಜಮೀನು ಹೊಂದಿರುವ ರೈತನು ಇವತ್ತು ಟ್ರ್ಯಾಕ್ಟರ್ ಹೊಂದಿರುತ್ತಾನೆ. ಆತನನ್ನು ದೊಡ್ಡ ರೈತ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಜೂ.14ರಂದು ನಿಗದಿಯಾಗಿರುವ ತಮ್ಮ ಪದಗ್ರಹಣ ಸಮಾರಂಭದ ಸಿದ್ಧತೆಗಳ ಕುರಿತು ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರಿಂದ ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಬಿಪಿಎಲ್ ಕಾರ್ಡುಗಳನ್ನು ವಾಪಸ್ ಪಡೆಯಲು ಬಿಡುವುದಿಲ್ಲ. ಒಂದು ವೇಳೆ ಸರಕಾರ ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ, ನಾವು ರೈತರ ಪರವಾಗಿ ನಿಲ್ಲುತ್ತೇವೆ ಎಂದು ಶಿವಕುಮಾರ್ ಹೇಳಿದರು.
ರೈತರು ಬಡವರಾಗಿದ್ದು, ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರಿಂದ ಪಡಿತರ ಚೀಟಿ ವಾಪಸ್ ಪಡೆಯುವುದು ಸರಿಯಲ್ಲ. ದೇಶದಲ್ಲಿ ಆಹಾರ ಭದ್ರತೆ ಕಾನೂನು ಜಾರಿಯಲ್ಲಿದೆ. ಈಗ ಪಡಿತರ ಚೀಟಿ ಹೊಂದಿರುವ ರೈತರಿಗೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.
ಕೋವಿಡ್ ವಿಚಾರದಲ್ಲಿ ಸರಕಾರ ಪ್ರಕಟಿಸಿರುವ ಪ್ಯಾಕೇಜ್ ಕೇವಲ ಘೋಷಣೆಯಾಗಿದ್ದು, ಯಾವುದೇ ರೈತ, ಕಾರ್ಮಿಕರಿಗೆ ತಲುಪಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ತಮ್ಮ ಹಳ್ಳಿಗಳ ಸುತ್ತಮುತ್ತಲು ಇರುವಂತಹ ರೈತರು, ಕಾರ್ಮಿಕರಿಗೆ ಆನ್‍ಲೈನ್ ನಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ನೆರವು ನೀಡುವಂತೆ ಶಿವಕುಮಾರ್ ಕರೆ ನೀಡಿದರು.
ಜೂ.14ರಂದು ಕೆಪಿಸಿಸಿ ಕಚೇರಿಯಲ್ಲಿ 150 ಜನರನ್ನು ಸೇರಿಸಿ ಪದಗ್ರಹಣ ಕಾರ್ಯಕ್ರಮ ಕಾರ್ಯಕ್ರಮ ನಡೆಸಲು ಅವಕಾಶ ಕೋರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆನ್‍ಲೈನ್ ಮೂಲಕ ಪ್ರತಿಜ್ಞಾ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದು. ಹೀಗಾಗಿ ಯಾರು ಕೂಡ ಈ ಕಾರ್ಯಕ್ರಮಕ್ಕೆ ಬೇರೆ ಜಿಲ್ಲೆಗಳಿಂದ ಬರುವುದು ಬೇಡ ಎಂದು ಅವರು ಮನವಿ ಮಾಡಿದರು.
ಪಂಚಾಯತ್ ಹಾಗೂ ವಾರ್ಡ್ ಮಟ್ಟದಲ್ಲಿ ಸೇರಿ ಈ ಪ್ರತಿಜ್ಞಾ ಕಾರ್ಯಕ್ರಮವನ್ನು 7,800 ಕಡೆ ಆಯೋಜಿಸಲಾಗಿದೆ. ಆದುದರಿಂದ, ನಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಹಿತೈಷಿಗಳು ಸ್ಥಳೀಯವಾಗಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಬೇಕು. ಇವತ್ತು ಈ ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಸಭೆ ನಡೆಸಲಾಗಿದೆ. ಪಕ್ಷವನ್ನು ಕೆಡರ್ ಬೇಸ್ ಪಕ್ಷವಾಗಿ ಕಟ್ಟಬೇಕಿದ್ದು, ನಿಮ್ಮ ಸಹಕಾರ ಮುಖ್ಯ. ಹೀಗಾಗಿ ಪ್ರತಿ ವೀಕ್ಷಕರು ಪಂಚಾಯತ್ ಗಳಿಗೆ ಕಡ್ಡಾಯವಾಗಿ ಪ್ರವಾಸ ಮಾಡಬೇಕು ಎಂದು ಅವರು ಹೇಳಿದರು.
ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡುವ ಕುರಿತು ನಡೆಯುತ್ತಿರುವ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೊದಲು ಪ್ರತಿಯೊಂದು ಹಳ್ಳಿಗಳಿಗೆ ಅಂತರ್ ಜಾಲ ಸಂಪರ್ಕ ಹಾಗೂ ಕಂಪ್ಯೂಟರ್ ವ್ಯವಸ್ಥೆಯನ್ನು ಕಲ್ಪಿಸಲಿ. ಆನಂತರ, ಆನ್‍ಲೈನ್ ಶಿಕ್ಷಣ ನೀಡಲು ಮುಂದಾಗಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







