ಜನಾಂಗೀಯ ತಾರತಮ್ಯವನ್ನು ಸುಟ್ಟು ಹಾಕಿ: ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಜಗತ್ತಿನಾದ್ಯಂತ ಪ್ರತಿಭಟನೆ

ಲಂಡನ್, ಜೂ. 7: ಜನಾಂಗೀಯ ತಾರತಮ್ಯ ಮತ್ತು ಪೊಲೀಸ್ ದೌರ್ಜನ್ಯಗಳನ್ನು ವಿರೋಧಿಸಿ ಶನಿವಾರ ಜಾಗತಿಕ ಮಟ್ಟದಲ್ಲಿ ಪ್ರತಿಭಟನಾ ಪ್ರದರ್ಶನಗಳು ಮತ್ತು ಮೆರವಣಿಗೆಗಳು ನಡೆದವು. ಸಿಡ್ನಿಯಿಂದ ಲಂಡನ್‌ವರೆಗೆ, ಆಕ್ರೋಶಿತ ಪ್ರತಿಭಟನಕಾರರು ಮೊಣಕಾಲೂರುತ್ತಾ, ತಮಟೆಗಳನ್ನು ಬಡಿಯುತ್ತಾ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಜನಾಂಗೀಯ ತಾರತಮ್ಯ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಮೆರಿಕದ ಮಿನಸೋಟ ರಾಜ್ಯದ ಮಿನಪೊಲಿಸ್ ನಗರದಲ್ಲಿ ಕರಿಯ ಜನಾಂಗದ ಜಾರ್ಜ್ ಫ್ಲಾಯ್ಡ್ ಪೊಲೀಸ್ ಸುಪರ್ದಿಯಲ್ಲಿ ಪ್ರಾಣಬಿಟ್ಟ ಘಟನೆಯನ್ನು ಪ್ರತಿಭಟಿಸಿ ಕೊರೋನ ವೈರಸ್ ಸಾಂಕ್ರಾಮಿಕದ ಭೀತಿಯನ್ನೂ ಲೆಕ್ಕಿಸದೆ ಈಗಾಗಲೇ ಅಮೆರಿಕದ ಬೀದಿಗಳಲ್ಲಿ ಲಕ್ಷಗಟ್ಟಳೆ ಜನರು ಪ್ರತಿಭಟನೆ ನಡೆಸಿದ್ದಾರೆ.
ಸಾಂಸ್ಥಿಕವಾಗಿ ಬೇರುಬಿಟ್ಟಿರುವ ಜನಾಂಗೀಯ ತಾರತಮ್ಯವನ್ನು ಸುಟ್ಟು ಹಾಕಲು ಇದು ಸಕಾಲ ಎಂದು ಲಂಡನ್‌ನ ಸಂಸತ್ ಕಟ್ಟಡದ ಹೊರಗೆ ನೆರೆದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಭಾಷಣಕಾರರೊಬ್ಬರು ಹೇಳಿದರು.
ಆಸ್ಟ್ರೇಲಿಯದಲ್ಲಿ, ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಆಕ್ರೋಶವನ್ನು ವ್ಯಕ್ತಪಡಿಸಲು ಬೇರೆ ಮಾರ್ಗವನ್ನು ಕಂಡುಕೊಳ್ಳಿ ಎಂಬ ಪ್ರಧಾನಿ ಸ್ಕಾಟ್ ಮೊರಿಸನ್‌ರ ಮನವಿಯ ಹೊರತಾಗಿಯೂ, ಲಕ್ಷಾಂತರ ಜನರು ಶನಿವಾರ ಬೀದಿಗಿಳಿದು ಪ್ರತಿಭಟಿಸಿದರು. ಬ್ರಿಟನ್‌ನಲ್ಲಿ, ಕೊರೋನ ವೈರಸ್ ಈಗಲೂ ನೈಜ ಬೆದರಿಕೆಯಾಗಿಯೇ ಉಳಿದಿದೆ ಎಂಬ ಆರೋಗ್ಯ ಸಚಿವ ಬೆದರಿಕೆಯನ್ನು ಕಡೆಗಣಿಸಿ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಅಮೆರಿಕದ ನಗರಗಳಲ್ಲಿ ಹುಟ್ಟಿಕೊಂಡ ಪ್ರತಿಭಟನೆಗಳು ಈಗ ನಿಧಾನವಾಗಿ ಜಗತ್ತಿನಾದ್ಯಂತ ಹರಡುತ್ತಿದೆ. ನಮಗೆ ನ್ಯಾಯ ಬೇಕು! ನಾವು ಉಸಿರಾಡಲು ಬಯಸುತ್ತೇವೆ! ಎಂದು ಟ್ಯುನಿಸ್‌ನಲ್ಲಿ ಪ್ರತಿಭಟನೆ ನಡೆಸಿದ ಸಾವಿರಾರು ಮಂದಿ ಘೋಷಣೆಗಳನ್ನು ಕೂಗಿದರು.
ದಕ್ಷಿಣ ಆಫ್ರಿಕದ ಪ್ರಿಟೋರಿಯ, ಫ್ರಾನ್ಸ್‌ನ ಪ್ಯಾರಿಸ್. ಜರ್ಮನಿಯ ನಗರಗಳಾದ ಫ್ರಾಂಕ್‌ಫರ್ಟ್ ಮತ್ತು ಬರ್ಲಿನ್ ಹಾಗೂ ಇರಾಕ್ ರಾಜಧಾನಿ ಬಗ್ದಾದ್‌ನಲ್ಲೂ ಪ್ರತಿಭಟನೆಗಳು ನಡೆದವು.
23 ಪೊಲೀಸರಿಗೆ ಗಾಯ: ಲಂಡನ್ ಪೊಲೀಸ್ ಅಧಿಕಾರಿ
ಜಾರ್ಜ್ ಫ್ಲಾಯ್ಡ್ ಸಾವಿನ ವಿರುದ್ಧ ಲಂಡನ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳ ವೇಳೆ ಕನಿಷ್ಠ 23 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ನಗರದ ಪೊಲೀಸ್ ಸೂಪರಿಂಟೆಂಡೆಂಟ್ ಜೋ ಎಡ್ವರ್ಡ್ಸ್ ತಿಳಿಸಿದ್ದಾರೆ.
ಜನರ ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅವರು ಬಹುತೇಕ ಶಾಂತ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ನಮ್ಮ ಪೊಲೀಸ್ ಸಿಬ್ಬಂದಿ ವೃತ್ತಿಪರರಾಗಿದ್ದಾರೆ ಹಾಗೂ ಸಂಯಮದಿಂದ ವರ್ತಿಸಿದ್ದಾರೆ. ಆದರೆ, ಒಂದು ಸಣ್ಣ ಗುಂಪು ಹಿಂಸಾಚಾರಕ್ಕಿಳಿದಿದ್ದು, ಕಳೆದ ಕೆಲವು ದಿನಗಳ ಅವಧಿಯಲ್ಲಿ 23 ಪೊಲೀಸರು ಗಾಯಗೊಂಡಿದ್ದಾರೆ. ಇದು ಅಸ್ವೀಕಾರಾರ್ಹ ಎಂದು ಅವರು ಹೇಳಿದರು.
ಶನಿವಾರ ಒಂದೇ ದಿನ 10 ಪೊಲೀಸರು ಗಾಯಗೊಂಡಿದ್ದಾರೆ ಹಾಗೂ 14 ಮಂದಿಯನ್ನು ಬಂಧಿಸಲಾಗಿದೆ ಎಂದರು.







