ಶ್ವೇತಭವನದ ಹೊರಗೆ ಮತ್ತೆ ಸಾವಿರಾರು ಮಂದಿಯಿಂದ ಪ್ರತಿಭಟನೆ

ವಾಶಿಂಗ್ಟನ್, ಜೂ. 7: ಮಿನಪೊಲಿಸ್ ನಗರದಲ್ಲಿ ಪೊಲೀಸರ ದೌರ್ಜನ್ಯದಲ್ಲಿ ಜಾರ್ಜ್ ಫ್ಲಾಯ್ಡ್ ಉಸಿರುಗಟ್ಟಿ ಮೃತಪಟ್ಟಿರುವುದನ್ನು ಪ್ರತಿಭಟಿಸಿ ಶನಿವಾರ ವಾಶಿಂಗ್ಟನ್‌ನ ಶ್ವೇತಭವನದ ಹೊರಗೆ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು. ಇದು ನಗರದಲ್ಲಿ ಈವರೆಗೆ ನಡೆದ ಪ್ರತಿಭಟನೆಗಳಲ್ಲೇ ಅತ್ಯಂತ ಬೃಹತ್ ಎಂದು ಹೇಳಲಾಗಿದೆ.
ಪ್ರತಿಭಟನಕಾರರು ಹಾಡುತ್ತಾ, ಘೋಷಣೆಗಳನ್ನು ಕೂಗುತ್ತಾ, ಭಾಷಣಗಳನ್ನು ಮಾಡುತ್ತಾ ಹಾಗೂ ಕೇಳುತ್ತಾ ಶ್ವೇತಭವನ, ನ್ಯಾಶನಲ್ ಮಾಲ್, ಲಿಂಕನ್ ಸ್ಮಾರಕ ಮತ್ತು ಕ್ಯಾಪಿಟಲ್ (ಅಮೆರಿಕದ ಸಂಸತ್ತು ಇರುವ ಸ್ಥಳ)ಗೆ ಮೆರವಣಿಗೆಯಲ್ಲಿ ಸಾಗಿದರು.
ನ್ಯಾಯವಿಲ್ಲದಿದ್ದರೆ, ಶಾಂತಿಯೂ ಇರುವುದಿಲ್ಲ ಎಂಬ ಘೋಷಣೆಗಳನ್ನು ಅವರು ಕೂಗಿದರು. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದ ಪ್ರತಿಭಟನಕಾರರು, “ನನ್ನ ಬಣ್ಣವು ನನ್ನ ಅಪರಾಧವಲ್ಲ, ರೇಸಿಸ್ಟ್-ಇನ್-ಚೀಫ್ (ಪ್ರಧಾನ ಜನಾಂಗೀಯವಾದಿ-ಅಮೆರಿಕ ಅಧ್ಯಕ್ಷರ ಪದವಿ ಕಮಾಂಡರ್-ಇನ್-ಚೀಫ್‌ನ್ನು ಅನುಕರಣೆ ಮಾಡುತ್ತಾ), ಎಫ್... ದ ಪೊಲೀಸ್, ಡೀಫಂಡ್ ದ ಪೊಲೀಸ್ (ಪೊಲೀಸರ ನಿಧಿಯನ್ನು ಕಡಿತಗೊಳಿಸಿ)” ಎಂಬ ಬರಹಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶಿಸಿದರು.





