ಕೊರೋನ ಅಂಕಿಸಂಖ್ಯೆಗಳನ್ನು ಮರೆಮಾಚುತ್ತಿರುವ ಬ್ರೆಝಿಲ್?

ಬ್ರೆಸೀಲಿಯ (ಬ್ರೆಝಿಲ್), ಜೂ. 7: ಜಗತ್ತಿನ ಹೊಸ ಕೊರೋನ ವೈರಸ್ ಕೇಂದ್ರಬಿಂದು ಆಗಿರುವ ಬ್ರೆಝಿಲ್ ತನ್ನ ಕೊರೋನ ವೈರಸ್ ಸಂಬಂಧಿ ಅಂಕಿಸಂಖ್ಯೆಗಳನ್ನು ಮರೆಮಾಚುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಾಂಕ್ರಾಮಿಕದ ಭೀಕರ ದಾಳಿಗೆ ಒಳಗಾಗಿರುವ ದೇಶಗಳ ಪೈಕಿ ಒಂದು ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಅಧ್ಯಕ್ಷ ಜೈರ್ ಬೊಲ್ಸೊನಾರೊ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.
24 ಗಂಟೆಗಳಲ್ಲಿ 27,075 ಸೋಂಕು ಪ್ರಕರಣಗಳು ಮತ್ತು 904 ಸಾವುಗಳು ಸಂಭವಿಸಿವೆ ಎಂದು ದೇಶ ಶನಿವಾರ ವರದಿ ಮಾಡಿದೆ. ಆದರೆ, ಅದು ಒಟ್ಟು ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿಲ್ಲ. ದೇಶದ ಕೊರೋನ ವೈರಸ್ ಸಾವಿನ ಸಂಖ್ಯೆಯು ಇಟಲಿಯ ಸಂಖ್ಯೆಯನ್ನು ದಾಟಿದ ಬಳಿಕ, ಬ್ರೆಝಿಲ್ ಶುಕ್ರವಾರ ಸಂಪೂರ್ಣ ಅಂಕಿಸಂಖ್ಯೆಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ.
ಸಾಂಕ್ರಾಮಿಕದ ಬಗ್ಗೆ ವಿವರಗಳನ್ನು ಒಳಗೊಂಡ ದೇಶದ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನ ಭಾಗವೊಂದು ಶನಿವಾರವಿಡೀ ಲಭ್ಯವಿರಲಿಲ್ಲ. ಈ ವೆಬ್‌ಸೈಟ್ ಜಾನ್ಸ್‌ಹಾಪ್‌ಕಿನ್ಸ್‌ನ ಜಾಗತಿಕ ಡ್ಯಾಶ್‌ಬೋರ್ಡ್‌ನಿಂದ ತಾತ್ಕಾಲಿಕವಾಗಿ ಮರೆಯಾಗಿತ್ತು.
“ಮಾಹಿತಿ ತಡೆಹಿಡಿಯುವ ಸರಕಾರವು ಸಾಂಕ್ರಾಮಿಕಕ್ಕಿಂತಲೂ ಹೆಚ್ಚು ಅಪಾಯಕಾರಿ”
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಇದೊಂದು ದುರಂತವಾಗಿದೆ ಎಂದು ಬ್ರೆಝಿಲ್‌ನ ಮಾಜಿ ಆರೋಗ್ಯ ಸಚಿವ ಲೂಯಿಸ್ ಹೆನ್ರಿಕ್ ಮ್ಯಾಂಡೆಟ ಶನಿವಾರ ತನ್ನ ವೆಬ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ. ಇದು ದೇಶದ ಸೇನಾಡಳಿತದ ಅವಧಿಯಲ್ಲಿ ಕಾಣಿಸಿಕೊಂಡ ಮೆದುಳುಜ್ವರ ಸಾಂಕ್ರಾಮಿಕದ ಅವಧಿಯಲ್ಲಿ ಮಾಹಿತಿಗಳನ್ನು ತಡೆಹಿಡಿದಿರುವುದಕ್ಕೆ ಸಮವಾಗಿದೆ ಎಂದು ಅವರು ಹೇಳಿದ್ದಾರೆ.
ಮಾಹಿತಿಗಳನ್ನು ತಡೆಹಿಡಿಯುವ ಸರಕಾರವು ಸಾಂಕ್ರಾಮಿಕಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಮ್ಯಾಂಡೆಟ, ಅಧ್ಯಕ್ಷ ಬೊಲ್ಸೊನಾರೊ ಅವರ ಒತ್ತಡಕ್ಕೆ ಮಣಿದು ಎರಡು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದಾರೆ.







