ಜೂ.8ರಿಂದ ಮಂಗಳೂರಿನ ಮಾಲ್‌ಗಳು ಪುನರಾರಂಭ

ಮಂಗಳೂರು, ಜೂ.7: ಕೊರೋನ ಲಾಕ್‌ಡೌನ್ ಬಳಿಕ ಜೂ. 8ರಿಂದ ಮಂಗಳೂರಿನಲ್ಲಿರುವ ಎಲ್ಲ ಮಾಲ್‌ಗಳು ಹೆಚ್ಚಿನ ಸುರಕ್ಷತೆಯೊಂದಿಗೆ ಪುನರಾರಂಭಗೊಳ್ಳಲಿವೆ.
ನಗರದ ಪ್ರತಿಷ್ಠಿತ ಫೋರಮ್ ಫಿಝಾ ಮಾಲ್, ಸಿಟಿ ಸೆಂಟರ್, ಭಾರತ್ ಮಾಲ್ ಸಹಿತ ಎಲ್ಲ ಜನಭರಿತ ಮಾಲ್‌ಗಳು ಗ್ರಾಹಕರಿಗೆ ಸುರಕ್ಷತಾ ಕ್ರಮಗಳ ಜತೆಗೆ ಸ್ವಾಗತಿಸಲು ಸಜ್ಜುಗೊಂಡಿವೆ.
ಗ್ರಾಹಕರ ಅನುಕೂಲದ ಹಿನ್ನೆಲೆಯಲ್ಲಿ ಅವರ ಕೈ ತಗಲುವ ಹಲವು ಟಚ್ ಪಾಯಿಂಟ್ ಗಳೊಂದಿಗೆ ಸುರಕ್ಷಿತ ಅಂತರ ವಿಚಾರದಲ್ಲಿ ಹಲವು ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ಎಲ್ಲ ಮಾಲ್‌ಗಳ ಮುಖ್ಯಸ್ಥರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮುಖಕ್ಕೆ ಮಾಸ್ಕ್, ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಮಾಲ್ ಪ್ರವೇಶಿಸುವ ಮುನ್ನ ಗ್ರಾಹಕರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸುವುದು. ಜತೆಯಲ್ಲಿ ಅವರಲ್ಲಿ ಆರೋಗ್ಯ ಸೇತು ಆಪ್ ಇದೆಯೇ ಎಂದು ಖಚಿತ ಪಡಿಸುವುದೂ ಇದರಲ್ಲಿ ಸೇರಿದೆ.
ಲಿಫ್ಟ್ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡಲು ಗ್ರಾಹಕ ನಿಲ್ಲುವ ಜಾಗಕ್ಕೆ ಮಾರ್ಕ್ ಮಾಡಲಾಗಿದೆ. ಕ್ಯಾಶ್ ಕೌಂಟರ್, ಕೈ ತಗಲುವ ಎಕ್ಸ್‌ಲೇಟರ್, ಕಾರ್ಡ್ ಸ್ವೈಪಿಂಗ್ ಮಿಶಿನ್, ಕುಳಿತುಕೊಳ್ಳುವ ಜಾಗಗಳು, ಕೈ ಚೀಲಗಳು, ಟ್ರಾಲಿಗಳು ಮೊದಲಾದವುಗಳನ್ನು ಪ್ರತಿ ಅಂಗಡಿಗಳು ಸ್ಯಾನಿಟೈಸ್ ಮಾಡಲಿವೆ ಎಂದು ಫೋರಂ ಮಾಲ್‌ನ ಜನರಲ್ ಮ್ಯಾನೇಜರ್ ಅರವಿಂದ ಶ್ರೀ ವಾಸ್ತವ ತಿಳಿಸಿದ್ದಾರೆ.
‘ಸರಕಾರದ ಮಾರ್ಗಸೂಚಿಯ ಅನ್ವಯವೇ ಮಾಲ್ ತೆರೆಯಲಾಗುತ್ತಿದ್ದು, ಗ್ರಾಹಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾಲ್‌ನ ಆವರಣದಲ್ಲಿ ಎಲ್ಲೆಲ್ಲಿ ಕುಳಿತುಕೊಳ್ಳವುದು ಸೇರಿದಂತೆ ಬಗೆಬಗೆಯ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಲಾಗಿದೆ’ ಎಂದು ಭಾರತ್ ಮಾಲ್‌ನ ವ್ಯವಸ್ಥಾಪಕ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
‘ಬರೋಬ್ಬರಿ ಎರಡು ತಿಂಗಳಿಗೂ ಹೆಚ್ಚು ಕಾಲ ಮಾಲ್‌ಗಳನ್ನು ತೆರೆಯಲು ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಹಲವು ಮಾರ್ಗಸೂಚಿಯನ್ವಯ ಮಾಲ್ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಹಕರು ಸಹಕರಿಸಬೇಕು’ ಎಂದು ಸಿಟಿ ಸೆಂಟರ್ ಮಾಲ್‌ನ ವ್ಯವಸ್ಥಾಪಕಿ ನಿಷಿತಾ ತಿಳಿಸಿದ್ದಾರೆ.







