ಎಕ್ಸ್‌ಪರ್ಟೈಸ್ ಕಂಪೆನಿಯ ಅತಂತ್ರ ಉದ್ಯೋಗಿಗಳು ತಾಯ್ನಾಡಿಗೆ
ಮೊದಲ ಬಾಡಿಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ 168 ಪ್ರಯಾಣಿಕರು

ಮಂಗಳೂರು, ಜೂ. 7: ಕೊರೋನ ಲಾಕ್‌ಡೌನ್‌ನಿಂದಾಗಿ ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿದ್ದ ಎಕ್ಸ್‌ಪರ್ಟೈಸ್ ಕಂಪೆನಿಯ 168 ಉದ್ಯೋಗಿಗಳು ವಿಶೇಷ ಬಾಡಿಗೆ ವಿಮಾನದಲ್ಲಿ ಮಂಗಳೂರಿಗೆ ರವಿವಾರ ಸಂಜೆ ಆಗಮಿಸಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಇದು ಮಂಗಳೂರಿಗೆ ಬಂದ ಎಕ್ಸ್‌ಪರ್ಟೈಸ್ ಕಂಪೆನಿಯ ಮೊದಲ ಬಾಡಿಗೆ ವಿಮಾನವಾಗಿದೆ.
ದಮಾಮ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡನೇ ವಿಶೇಷ ಬಾಡಿಗೆ ವಿಮಾನವು ಮಂಗಳೂರಿಗೆ ಆಗಮಿಸಿದ್ದರೆ 3ನೆ ವಿಮಾನವು 168 ಪ್ರಯಾಣಿಕರನ್ನು ಹೊತ್ತು ಚೆನ್ನೈಗೆ ತಲುಪಿದೆ.
ಈ ಕುರಿತು ‘ವಾರ್ತಾಭಾರತಿ’ ಜೊತೆ ಮಾಹಿತಿ ಹಂಚಿಕೊಂಡಿರುವ ಎಕ್ಸ್‌ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ, ‘‘ರವಿವಾರ ಬಾಡಿಗೆ ವಿಮಾನದಲ್ಲಿ ಎಕ್ಸ್‌ಪರ್ಟೈಸ್ ಕಂಪೆನಿ ಕಳುಹಿಸಿದ 168 ಪ್ರಯಾಣಿಕರು ಮಂಗಳೂರು ತಲುಪಿದ್ದಾರೆ. ಇನ್ನುಳಿದ ಉದ್ಯೋಗಿಗಳು ಮುಂದಿನ ವಿಮಾನಗಳಲ್ಲಿ ಆಗಮಿಸಲಿದ್ದಾರೆ’’ ಎಂದು ತಿಳಿಸಿದ್ದಾರೆ.
‘‘ದಮಾಮ್‌ನಿಂದ ಒಂಬತ್ತು ವಿಮಾನಗಳು ಅತಂತ್ರ ಉದ್ಯೋಗಿಗಳನ್ನು ಸ್ವದೇಶಕ್ಕೆ ಹೊತ್ತು ತೆರಳುತ್ತಿದ್ದು, ದೆಹಲಿಗೆ ಎರಡು ಬಾಡಿಗೆ ವಿಮಾನ, ಅಹ್ಮದಾಬಾದ್ (ಗುಜರಾತ್), ಕೊಚ್ಚಿ, ಹೈದರಾಬಾದ್‌ಗೆ ತಲಾ ಒಂದೊಂದು ಬಾಡಿಗೆ ವಿಮಾನಗಳು ಮುಂದಿನ ದಿನಗಳಲ್ಲಿ ಪ್ರಯಾಣ ಬೆಳೆಸಲಿವೆ. ಹೀಗಾಗಲೇ ಚೆನ್ನೈಗೆ 2 ಬಾಡಿಗೆ ವಿಮಾನಗಳು ತಲುಪಿವೆ. ಮಂಗಳೂರಿಗೆ ಈಗಾಗಲೇ ಒಂದು ವಿಮಾನ ಆಗಮಿಸಿದ್ದು, ಶೀಘ್ರದಲ್ಲೇ ಇನ್ನೊಂದು ವಿಮಾನ ಆಗಮನಕ್ಕೆ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.







.jpeg)

