ಮಂಗಳೂರು: ಕೆಲವು ಮಸೀದಿಗಳಲ್ಲಿ ಜೂ.8ರಿಂದ ನಮಾಝ್ ಆರಂಭ
ಉಳ್ಳಾಲ ಕೇಂದ್ರ ಮಸೀದಿ ತೆರೆಯದಿರಲು ನಿರ್ಧಾರ

ಮಂಗಳೂರು, ಜೂ.7: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ನಮಾಝ್ ನಿರ್ವಹಿಸುವುದನ್ನು ನಿರ್ಬಂಧಿಸಿದ್ದ ರಾಜ್ಯ ಸರಕಾರವು ನಮಾಝ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ಕೆಲವು ಮಸೀದಿಗಳಲ್ಲಿ ಜೂ.8ರಿಂದ ನಮಾಝ್ ಆರಂಭಗೊಳ್ಳಲಿದೆ.
ನಗರದ ಬಂದರ್‌ನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಜಮಾಅತ್ ಖಾನಾ ಮತ್ತು ಕುದ್ರೋಳಿಯ ಕಂಡತ್‌ಪಳ್ಳಿಯಲ್ಲಿ ನಮಾಝ್ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದ್ದು, ಸೋಮವಾರ ಮುಂಜಾವದಿಂದ ದಿನದಲ್ಲಿ ಐದು ಬಾರಿ ನಮಾಝ್ ನಿರ್ವಹಿಸಲಾಗುತ್ತದೆ.
ರಾಜ್ಯ ಸರಕಾರ ಮತ್ತು ವಕ್ಫ್ ಮಂಡಳಿಯ ಮಾರ್ಗಸೂಚಿಯಂತೆ ನಮಾಝ್ ನಿರ್ವಹಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖ ಅಹ್ಮದ್ ಮುಸ್ಲಿಯಾರ್ ಅವರ ಮಾರ್ಗದರ್ಶನದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನುಳಿದಂತೆ ನಗರದ ಈದ್ಗಾ ಜುಮಾ ಮಸ್ಜಿದ್, ಪಂಪ್‌ವೆಲ್‌ನ ಮಸ್ಜಿದುತ್ತಖ್‌ವಾ, ಕಂಕನಾಡಿಯ ಜುಮಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದುನ್ನೂರ್ ಸಹಿತ ನಗರದ ಪ್ರಮುಖ ಸ್ಥಳಗಳಲ್ಲಿರುವ ಮಸೀದಿಗಳಲ್ಲಿ ಪರಿಸ್ಥಿತಿ ಅವಲೋಕಿಸಿ ನಮಾಝ್ ನಿರ್ವಹಿಸುವ ಕುರಿತು ನಿರ್ಧಾರಕ್ಕೆ ಬರಲಾಗಿದೆ. ಪೊಲೀಸ್‌ಲೇನ್‌ನ ಫೌಝಿಯಾ, ಸ್ಟೇಟ್‌ಬ್ಯಾಂಕ್‌ನ ಮಸ್ಜಿದ್ ಇಬ್ರಾಹೀಂ ಖಲೀಲ್‌ನಲ್ಲಿ ಸದ್ಯ ನಮಾಝ್‌ಗೆ ಅವಕಾಶ ನೀಡದಿರಲು ಆಡಳಿತ ಕಮಿಟಿಯು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಮುಂಜಾಗ್ರತೆ ಕ್ರಮವಾಗಿ ಕೈಗೊಳ್ಳಬೇಕಾದ ನಿಯಮಗಳನ್ನು ಪಾಲಿಸಿ, ನಮಾಝ್ ನಿರ್ವಹಿಸಲು ಆಯಾ ಮಸೀದಿಗಳ ಆಡಳಿತ ಕಮಿಟಿ ಮುಂದಾಗಿದೆ.
ಉಳ್ಳಾಲ ಕೇಂದ್ರ ಮಸೀದಿ ತೆರೆಯದಿರಲು ನಿರ್ಧಾರ
ಉಳ್ಳಾಲ ಕೇಂದ್ರ ಜುಮಾ ಮಸೀದಿ ಯಲ್ಲಿ ಸಾಮೂಹಿಕ ನಮಾಝ್ ಮತ್ತು ಜುಮಾ ನಮಾಝ್ ಜೂನ್ 30ವರೆಗೆ ನಿರ್ವಹಿಸದೆ ಯತಾಸ್ಥಿತಿ ಕಾಪಾಡಲು ಉಳ್ಳಾಲ ದರ್ಗಾ ಸಮಿತಿ ನಿರ್ಧರಿಸಿದೆ.
ಜೂ.8 ರಂದು ಮಸೀದಿ ತೆರೆಯಲು ಸರಕಾರ ಅನುಮತಿ ನೀಡಿದರೂ ಮನೆಯಲ್ಲೇ ಅಂಗ ಶುದ್ದಿ ಮಾಡಿ ‘ಮುಸಲ್ಲಾ’ ತಂದು ಮಸೀದಿಯಲ್ಲಿ ನಮಾಝ್ ಮಾಡಲು ಕಷ್ಟ ಇದೆ. ನಮಾಝ್ ನಲ್ಲಿ ಜಾಸ್ತಿ ಉತ್ಸಾಹ ಇರುವ 65 ಪ್ರಾಯದ ಹಿರಿಯರನ್ನು ಮಸೀದಿಗೆ ಬರದಂತೆ ತಡೆಯಲು ಸಾಧ್ಯವಿಲ್ಲ. ಈ ಕಾರಣದಿಂದ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಬರಲು ನಿರ್ಧರಿಸಲಾಗಿದೆ ಎಂದು ದರ್ಗಾ ಅಧ್ಯಕ್ಷ ರಶೀದ್ ಹಾಜಿ ತಿಳಿಸಿದ್ದಾರೆ.







