ದ.ಕ.ಜಿಲ್ಲೆ : ಜೂ.8ರಿಂದ ಹೊಟೇಲ್‌ಗಳು ಆರಂಭ ; ಕೆಲಸದಾಳುಗಳ ಕೊರತೆಯೇ ಸಮಸ್ಯೆ
ಮಂಗಳೂರು, ಜೂ.7: ರಾಜ್ಯ ಸರಕಾರದ ಸೂಚನೆಯಂತೆ ಜೂ.8ರಿಂದ ದ.ಕ.ಜಿಲ್ಲೆಯಲ್ಲಿ ಹೊಟೇಲುಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಈ ಮಧ್ಯೆ ಮಧ್ಯಮ ಮತ್ತು ದೊಡ್ಡ ಮಟ್ಟದ ಹೋಟೆಲ್‌ಗಳಲ್ಲಿ ಅಡುಗೆ, ಕ್ಲೀನಿಂಗ್‌ಗೆ ಕೆಲಸಗಾರರು ಬರುತ್ತಾರೋ, ಇಲ್ಲವೋ ಎಂಬ ಭೀತಿ ಹೊಟೇಲ್ ಮಾಲಕರಿಗೆ ಎದುರಾಗಿದೆ.
ಅಂದರೆ ಹೊಟೇಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹೊರ ಜಿಲ್ಲೆಯ ಕಾರ್ಮಿಕರು ಊರಿಗೆ ತೆರಳಿದ್ದು, ಬೇಗನೆ ಮರಳಿ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ. ಈಗಾಗಲೇ ಹೊಟೇಲ್ ಉದ್ಯಮಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಜನರು ಬಸ್‌ಗಳಲ್ಲಿ ಓಡಾಟಕ್ಕೆ ಹಿಂದೇಟು ಹಾಕುತ್ತಿರುವ ಆತಂಕವೂ ಹೊಟೇಲ್ ಮಾಲಕರಲ್ಲಿದೆ. ಕೆಲವು ಹೋಟೆಲ್‌ಗಳಲ್ಲಿ ಪಾರ್ಸೆಲ್ ವ್ಯವಸ್ಥೆಗಳಿದ್ದರೂ ಕೂಡ ಗ್ರಾಹಕರ ಸ್ಪಂದನೆ ನೀರಸವಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಅನುಸರಿಸಿಕೊಂಡು ವ್ಯವಹಾರ ನಡೆಸಬೇಕಾದ ಕಾರಣ ಗ್ರಾಹಕರೂ ಕೂಡ ಸಹಕರಿಸ ಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರದ ಹೊಟೇಲೊಂದರ ಮಾಲಕರು ತಿಳಿಸಿದ್ದಾರೆ.
ಹೊಟೇಲ್‌ಗಳ ಚಟುವಟಿಕೆಗೆ ಕೆಲಸಗಾರರ ಸಮಸ್ಯೆ ಉಂಟಾಗಿದೆ. ಉಡುಪಿ, ಕುಂದಾಪುರ, ಕಾರ್ಕಳ ಮತ್ತಿತರ ಕಡೆಯೂ ಈ ಸಮಸ್ಯೆ ಹೆಚ್ಚಿವೆ. ಕೊರೋನ ಸೋಂಕಿನ ಭಯದಿಂದ ಬಸ್‌ಗಳನ್ನು ಆಶ್ರಯಿಸಿರುವ ಕೆಲಸಗಾರರು ಕೂಡ ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ. ಹೊಸ ಕೆಲಸಗಾರರು ಸಿಗುತ್ತಿಲ್ಲ. ಹಾಗಾಗಿ ಕೆಲಕಾಲ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ದ.ಕ. ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅಭಿಪ್ರಾಯಪಟ್ಟಿದ್ದಾರೆ.







