ಸೋಮವಾರ ಧಾರ್ಮಿಕ ಕೇಂದ್ರಗಳು, ಹೋಟೆಲ್, ಮಾಲ್‍ಗಳು ಕಾರ್ಯಾರಂಭ
ಸಹಜ ಸ್ಥಿತಿಯತ್ತ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು

ಬೆಂಗಳೂರು, ಜೂ. 7: ಮಾರಕ ಕೊರೋನ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೆ, ಮಾ.23ರಿಂದ ಬಂದ್ ಆಗಿದ್ದ ಹೋಟೆಲ್, ಶಾಪಿಂಗ್ ಮಾಲ್‍ಗಳು, ದೇವಸ್ಥಾನ, ಮಸೀದಿ, ಚರ್ಚ್‍ಗಳು ನಾಳೆಯಿಂದ (ಜೂ.8) ಪುನರಾರಂಭಗೊಳ್ಳಲಿದ್ದು, ಬಹುತೇಕ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಆರಂಭಗೊಳ್ಳಲಿವೆ.
ಸೋಂಕು ತಡೆಗಟ್ಟಲು ಹೇರಿದ್ದ ಸುದೀರ್ಘ ಎಪ್ಪತ್ತೈದು ದಿನಗಳ ಲಾಕ್‍ಡೌನ್ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿ ಅನ್ವಯ ವ್ಯಾಪಾರ, ವಹಿವಾಟು ಸಹಜ ಸ್ಥಿತಿಗೆ ಬರುತ್ತಿದೆ. ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಚಟುವಟಿಕೆಗಳ ಪುನರಾರಂಭಕ್ಕೆ ಸಿದ್ಧತೆ ಮಾಡಲಾಗಿದೆ. ನಾಳೆಯಿಂದ ಕೊರೋನ ಆನ್‍ಲಾಕ್-1.0 ಆರಂಭಗೊಳ್ಳಲಿದ್ದು, ಸರಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಸೋಂಕು ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಹೋಟೆಲ್, ಮಾಲ್ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಎಲ್ಲ ಸ್ಥಳಗಳಲ್ಲಿ ಸ್ಯಾನಿಟೈಸರ್ ಇರಿಸಬೇಕು, ಜೊತೆಗೆ ಥರ್ಮಲ್ ಸ್ಕ್ಯಾನರ್ ಮೂಲಕ ಕಡ್ಡಾಯವಾಗಿ ಎಲ್ಲರ ತಪಾಸಣೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.
ಮಾ.23ರ ಲಾಕ್‍ಡೌನ್ ಘೋಷಣೆ ನಂತರ ಹೋಟೆಲ್‍ಗಳಲ್ಲಿ ಕೇವಲ ಪಾರ್ಸಲ್ ಗಷ್ಟೇ ಅವಕಾಶ ನೀಡಲಾಗಿತ್ತು. ನಾಳೆಯಿಂದ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಊಟ, ಉಪಾಹಾರ, ಕಾಫಿ, ಟೀ ಸೇವನೆಗೆ ಅವಕಾಶ ಕಲ್ಪಿಸಿದೆ. ಊಟ, ಉಪಹಾರಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ.
'ಕಂಟೈನ್ಮೆಂಟ್ ಝೋನ್'ಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಹಾಗೂ ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಆರಂಭಿಸಲು ಅನುಮತಿ ನೀಡಿದೆ. ದೇವಸ್ಥಾನಗಳಿಗೆ 65 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಸೋಂಕಿನ ಲಕ್ಷಣ ಇರುವವರಿಗೆ ಅವಕಾಶ ನಿರಾಕರಿಸಲಾಗಿದೆ.
ಈಗಾಗಲೇ ಬಸ್, ಆಟೋ ರಿಕ್ಷಾ, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಆರಂಭಿಸಿದ್ದು, ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳನ್ನು ಹೊರತುಪಡಿಸಿ ಅಂತರರಾಜ್ಯ ಸಾರಿಗೆ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಾಗಕರಿಕರ ಬದ್ಧತೆ ಮುಖ್ಯ: ಸೋಂಕು ತಡೆಗಟ್ಟಲು ನಾಗರಿಕರ ಬದ್ಧತೆ ಮತ್ತು ಕಾಳಜಿ ಇನ್ನು ಮುಂದೆ ಬಹಳ ಮುಖ್ಯ. ಆ ಹಿನ್ನೆಲೆಯಲ್ಲಿ ಅನಗತ್ಯವಾಗಿ ಹೊರಗೆ ಸಂಚರಿಸುವುದನ್ನು ನಿಲ್ಲಿಸಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು, ಜೊತೆಗೆ ಸಾಬೂನಿನಿಂದ ಆಗಾಗ ಕೈತೊಳೆದುಕೊಳ್ಳುವ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಆರಂಭವಿಲ್ಲ: ಶಾಲಾ-ಕಾಲೇಜುಗಳು, ಈಜುಕೊಳಗಳು, ಚಿತ್ರಮಂದಿರಗಳು, ಜಿಮ್‍ಗಳು ಸೇರಿದಂತೆ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಭೆ, ಸಮಾರಂಭಗಳಿಗೆ ಇನ್ನೂ ಯಾವುದೇ ಅವಕಾಶ ಕಲ್ಪಿಸಿಲ್ಲ. ಈ ಬಗ್ಗೆ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.







