ಕರ್ಣಾಟಕ ಬ್ಯಾಂಕ್: 431 ಕೋಟಿ ರೂ. ಲಾಭ

ಮಂಗಳೂರು, ಜೂ.7: ಕರ್ಣಾಟಕ ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಗೊಂಡ ಪ್ರಸಕ್ತ ವಿತ್ತೀಯ ವರ್ಷ (2019-20) ದಲ್ಲಿ 431.78 ಕೋಟಿ ರೂ. ನಿವ್ವಳ ಲಾಭವನ್ನು ಘೋಷಿಸಿದೆ. ವಿತ್ತೀಯ ವರ್ಷದ 4ನೇ ತ್ರೈಮಾಸಿಕ ಅಂತ್ಯಕ್ಕೆ 27.31 ಕೋಟಿ ರೂ. ನಿವ್ವಳ ಲಾಭವನ್ನು ಘೋಷಿಸಿದೆ.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮುಕ್ತಾಯಗೊಂಡ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಹಣಕಾಸು ವರದಿ ಅಂಗೀಕಾರಗೊಂಡಿತು.
ಬ್ಯಾಂಕಿನ ಒಟ್ಟು ವ್ಯವಹಾರವು 1,28,749.42 ಕೋಟಿ ರೂ. ತಲುಪಿದ್ದು, ವಾರ್ಷಿಕ ಶೇ.4.44 ರ ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಠೇವಣಿಗಳು 68,452 ಕೋಟಿ ರೂ.ನಿಂದ ವೃದ್ಧಿಗೊಂಡು, 71,785.15 ಕೋಟಿ ರೂ.ಗೆ ತಲುಪಿದೆ. 54,828 ಕೋಟಿ ರೂ.ಗಳಷ್ಟಿದ್ದ ಬ್ಯಾಂಕಿನ ಮುಂಗಡಗಳು 56,964.27 ಕೋಟಿ ರೂ.ಗೆ ತಲುಪಿದೆ.
ಬ್ಯಾಂಕಿನ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯ ಠೇವಣಿಗಳು (ಕಾಸಾ ಠೇವಣಿ) ಅನುಪಾತ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು ಠೇವಣಿಗಳ ಶೇ.28.91ರಷ್ಟಕ್ಕೆ ತಲುಪಿದ್ದು, ಇದು ಕಳೆದ ವರ್ಷಾಂತ್ಯಕ್ಕೆ ಶೇ.28.06ರಷ್ಟಿತ್ತು. ಬ್ಯಾಂಕ್‌ನ ನಿರ್ವಹಣಾ ಲಾಭವು ಶೇ.14.27ರ ವೃದ್ಧಿದರದಲ್ಲಿ ಬೆಳವಣಿಗೆ ಕಂಡಿದ್ದು, 1,656.77 ಕೋಟಿ ರೂ. ತಲುಪಿದೆ. ಬ್ಯಾಂಕಿನ ಪ್ರಾವಿಶನ್ ಕವರೇಜ್ ರೇಶಿಯೋ ಉತ್ತಮಗೊಂಡಿದ್ದು ಶೇ. 64.70ಗೆ ತಲುಪಿದೆ. ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ತಹಬಂದಿಯಲ್ಲಿದ್ದು, ಬ್ಯಾಂಕಿನ ಸ್ಥೂಲ ಅನುತ್ಪಾದಕ ಸೊತ್ತುಗಳು (ಜಿಎನ್‌ಪಿಎ) ಇಳಿಕೆ ಕಂಡಿದೆ.
ಮಾರ್ಚ್ 31ರ ಅಂತ್ಯಕ್ಕೆ ಶೇ.4.82ರಷ್ಟಿವೆ. ಇವು ಮೂರನೇ ತ್ರೈಮಾಸಿಕದಲ್ಲಿ ಶೇ.4.99 ರಷ್ಟಿದ್ದವು. ಬ್ಯಾಂಕಿನ ನಿವ್ವಳ ಅನುತ್ಪಾದಕ ಸ್ವತ್ತುಗಳು (ಎನ್‌ಎನ್‌ಪಿಎ) ಕೂಡ ಉತ್ತಮಗೊಂಡಿದ್ದು ಶೇ.3.08ರಷ್ಟಿವೆ. ಕಳೆದ ತ್ರೈಮಾಸಿಕದಲ್ಲಿ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ.3.75ರಷ್ಟಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ಕಳೆದ ವಿತ್ತೀಯ ವರ್ಷ ಆರ್ಥಿಕ ರಂಗಕ್ಕೆ ಹಲವು ಸವಾಲುಗಳನ್ನು ಒಡ್ಡಿದ ವರ್ಷ. ಆರ್ಥಿಕ ಸಂಕಷ್ಟದ ಈ ಸಮಯದಲ್ಲೂ ಬ್ಯಾಂಕಿನ ಉತ್ತಮ ಕಾರ್ಯಕ್ಷಮತೆಯಿಂದಾಗಿ ನಾವು ಉತ್ತಮ ಫಲಿತಾಂಶ ನೀಡಲು ಸಾಧ್ಯವಾಯಿತು. ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿ ಬ್ಯಾಂಕಿನ ಪ್ರಾವಿಶನ್ ಕವರೇಜ್ ರೇಶಿಯೋ (ಪಿಸಿಆರ್) ಕೂಡ ವೃದ್ಧಿಯನ್ನು ಕಂಡಿದೆ ಎಂದರು.
ಬ್ಯಾಂಕಿನ ಮುಂಗಡಗಳ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರಿಂದ ರಿಟೇಲ್ ಹಾಗೂ ಮಿಡ್ ಕಾರ್ಪೊರೇಟ್ ಮುಂಗಡಗಳು ವೃದ್ಧಿಯಾಗಲು ಸಹಾಯವಾಯಿತು. ನಮ್ಮ ರಿಟೇಲ್ ಹಾಗೂ ಮಿಡ್ ಕಾರ್ಪೊರೇಟ್ ಮುಂಗಡಗಳು ಕ್ರಮವಾಗಿ ಶೇ.11.07 ಮತ್ತು ಶೇ.11.14 ದರದಲ್ಲಿ ಬೆಳವಣಿಗೆಯನ್ನು ಕಂಡವು ಎಂದು ತಿಳಿಸಿದರು.
‘ಕೆಬಿಎಲ್ ವಿಕಾಸ್’ ಎಂಬ ಪರಿವರ್ತನಾ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ, ಐಟಿ ತಂತ್ರಜ್ಞಾನದ ಗುಣಮಟ್ಟದಲ್ಲಿ ಹೆಚ್ಚಳ ಹಾಗೂ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲು ಸಾಧ್ಯವಾಗಿದೆ ಎಂದರು.







