ಬೆಂಗಳೂರಿನಲ್ಲಿ ಒಂದೇ ದಿನ 23 ಹೊಸ ಕೊರೋನ ಪ್ರಕರಣಗಳು ದೃಢ: ಇಬ್ಬರು ಸಾವು

ಬೆಂಗಳೂರು, ಜೂ.7: ನಗರದಲ್ಲಿ ರವಿವಾರ 23 ಕೊರೋನ ಸೋಂಕಿತರು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ನಗರದಲ್ಲಿ ಇಂದು ಒಂದೇ ದಿನ 22 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಇದುವರೆಗೆ 475 ಕೊರೋನ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ರವಿವಾರ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ರೋ-2,519ರ 61 ವರ್ಷದ ಬೆಂಗಳೂರು ಮೂಲದ ಮಹಿಳೆ ಉಸಿರಾಟ ತೊಂದರೆ ಹಾಗೂ ಮಧುಮೇಹ, ರಕ್ತದೊತ್ತಡ, ಹೈಥೈರಾಯಿಸಮ್ ಹಿನ್ನೆಲೆಯಲ್ಲಿ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೆಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ರೋ-4,315ರ 51 ವರ್ಷದ ಬೆಂಗಳೂರು ಮೂಲದ ಪುರುಷ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇವರಿಗೆ ಜೂ.3 ರಂದು ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾರೆ. ಜತೆಗೆ ನಗರದಲ್ಲಿ ಐಸಿಯುನಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರವಿವಾರ 23 ಜನರಿಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ 11 ಜನ ಮಹಿಳೆಯರು ಹಾಗೂ 12 ಜನ ಪುರುಷರಿದ್ದಾರೆ. ಇದರಲ್ಲಿ ಅಂತರ್ ರಾಷ್ಟ್ರೀಯ ಪ್ರಯಾಣಿಕರು, ಅಂತರ್ ರಾಜ್ಯ ಪ್ರಯಾಣಿಕರು ಒಬ್ಬರು ಅಂತರ್ ಜಿಲ್ಲೆ ಪ್ರಯಾಣ ಮಾಡಿದವರಿಗೂ ಸೋಂಕು ಕಾಣಿಸಿಕೊಂಡಿದೆ.
ಇದರ ಜತೆಗೆ ರೋಗಿ ನಂ.469, 2665, 4006, 4317ರ ಜತೆ ಸಂಪರ್ಕ ಹೊಂದಿದವರಿಗೂ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಒಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರನ್ನು ಬೆಂಗಳೂರಿನ ನಿಗದಿತ ಆಸ್ಪತೆಯ ಐಸಿಯು ವಾರ್ಡ್‍ಗೆ ವರ್ಗಾಯಿಸಲಾಗಿದೆ. ಇವತ್ತು ಆಂಧ್ರಪ್ರದೇಶದಿಂದ ಬಂದಿದ್ದ 18 ವರ್ಷದ ಯುವಕ ಹಾಗೂ 72 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.







