ವಾಶಿಂಗ್ಟನ್ ಡಿಸಿಯಲ್ಲಿ 10,000 ಸೈನಿಕರನ್ನು ನಿಯೋಜಿಸಲು ಬಯಸಿದ್ದ ಟ್ರಂಪ್: ಹಿರಿಯ ಅಧಿಕಾರಿ

ವಾಶಿಂಗ್ಟನ್, ಜೂ. 7: ಮಿನಪೊಲಿಸ್ ನಗರದಲ್ಲಿ ಕರಿಯ ವ್ಯಕ್ತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವುದನ್ನು ವಿರೋಧಿಸಿ ನಡೆಯುತ್ತಿರುವ ನಾಗರಿಕ ಪ್ರತಿಭಟನೆಗಳನ್ನು ತಡೆಯಲು ವಾಶಿಂಗ್ಟನ್ ಡಿಸಿ ಪ್ರದೇಶದಲ್ಲಿ 10,000 ಸೈನಿಕರನ್ನು ನಿಯೋಜಿಸಬೇಕು ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸಲಹೆಗಾರರಿಗೆ ಹೇಳಿದ್ದರು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವಿಷಯದ ಬಗ್ಗೆ ಕಳೆದ ಸೋಮವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಟ್ರಂಪ್ ಮತ್ತು ಪೆಂಟಗನ್ (ರಕ್ಷಣಾ ಇಲಾಖೆ) ಅಧಿಕಾರಿಗಳ ನಡುವೆ ಕಾವೇರಿದ ಚರ್ಚೆ ನಡೆದಿತ್ತು. ವಾಶಿಂಗ್ಟನ್‌ನಲ್ಲಿ ಸೈನಿಕರನ್ನು ನಿಯೋಜಿಸಬೇಕು ಎಂಬುದಾಗಿ ಟ್ರಂಪ್ ಪಟ್ಟು ಹಿಡಿದಿದ್ದರು. ಆದರೆ, ಪೆಂಟಗನ್ ಅಧಿಕಾರಿಗಳು ಈ ಪ್ರಸ್ತಾವವನ್ನು ವಿರೋಧಿಸಿದ್ದರು ಎಂದು ಅಧಿಕಾರಿ ತಿಳಿಸಿದರು.
ಆ ಸಭೆಯಲ್ಲಿ ಭಾಗವಹಿಸಿದ್ದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಜನರಲ್ ಮಾರ್ಕ್ ಮಿಲಿ ಮತ್ತು ಅಟಾರ್ನಿ ಜನರಲ್ ವಿಲಿಯಮ್ ಬರ್, ಟ್ರಂಪ್‌ರ ಪ್ರಸ್ತಾವವನ್ನು ವಿರೋಧಿಸಿದ್ದರು ಎನ್ನಲಾಗಿದೆ.
ಇದಕ್ಕೆ ಬದಲಾಗಿ, ದೇಶಿ ಸಂಘರ್ಷಗಳನ್ನು ನಿಗ್ರಹಿಸಲು ಸಾಮಾನ್ಯವಾಗಿ ನಿಯೋಜಿಸಲಾಗುವ ನ್ಯಾಶನಲ್ ಗಾರ್ಡ್ ಯೋಧರನ್ನು ನಿಯೋಜಿಸಬಹುದು ಎಂಬುದಾಗಿ ಪೆಂಟಗನ್ ನಾಯಕತ್ವ ಶಿಫಾರಸು ಮಾಡಿತು ಹಾಗೂ ಇದನ್ನು ಟ್ರಂಪ್ ಒಪ್ಪಿಕೊಂಡರು ಎಂದು ಆ ಅಧಿಕಾರಿ ಹೇಳಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.







