83 ದಿನಗಳ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಹೊಸದಿಲ್ಲಿ,ಜೂ.7: 83 ದಿನಗಳ ವಿರಾಮದ ಬಳಿಕ ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿದ್ದು,ರವಿವಾರ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ತಲಾ 60 ಪೈಸೆ ಏರಿಕೆಯನ್ನು ಮಾಡಲಾಗಿದೆ.
ದಿಲ್ಲಿಯಲ್ಲಿ ಶನಿವಾರ ಪ್ರತಿ ಲೀ.ಗೆ 71.26 ರೂ.ಇದ್ದ ಪೆಟ್ರೋಲ್ ಬೆಲೆ ರವಿವಾರ 71.86 ರೂ.ಗೆ ಏರಿಕೆಯಾಗಿದ್ದು,ಡೀಸೆಲ್ ಬೆಲೆ 69.39 ರೂ.ನಿಂದ 69.99 ರೂ.ಗೆ ಜಿಗಿದಿದೆ.
ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಎಟಿಎಫ್ ಮತ್ತು ಎಲ್‌ಪಿಜಿ ಬೆಲೆಗಳನ್ನು ನಿಯಮಿತವಾಗಿ ಪರಿಷ್ಕರಿಸುತ್ತಿದ್ದರೂ ಮೇಲ್ನೋಟಕ್ಕೆ ಕಂಡು ಬಂದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತದ ಹಿನ್ನೆಲೆಯಲ್ಲಿ ಮಾ.16ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆಯನ್ನು ತಡೆಹಿಡಿದಿದ್ದವು. ಇದಕ್ಕೂ ಮುನ್ನ ಜಾಗತಿಕ ಬೆಲೆ ಕುಸಿತದ ಲಾಭವನ್ನ್ನು ಪಡೆದುಕೊಳ್ಳಲು ಕೇಂದ್ರವು ಇವೆರಡೂ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ ತಲಾ ಮೂರು ರೂ.ಗಳಷ್ಟು ಹೆಚ್ಚಿಸಿತ್ತು. ಮೇ 6ರಂದು ಸರಕಾರವು ಮತ್ತೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 10 ರೂ. ಮತ್ತು ಡೀಸೆಲ್‌ಗೆ 13 ರೂ.ಹೆಚ್ಚಿಸಿತ್ತು. ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿದಿದ್ದ ಹಿನ್ನೆಲೆಯಲ್ಲಿ ತೈಲ ಮಾರಾಟ ಕಂಪನಿಗಳು ಈ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.





