ಮುಲ್ಕಿಯ ಉದ್ಯಮಿ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹ: ಟ್ವಿಟರ್ ನಲ್ಲಿ #JusticeForAbdulLatheef ಟ್ರೆಂಡಿಂಗ್

ಮಂಗಳೂರು: ಜೂ. 5: ಶುಕ್ರವಾರ ಮುಲ್ಕಿ ನಗರದಲ್ಲಿ ಹಾಡಹಗಲೇ ನಡೆದ ಉದ್ಯಮಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಎಲ್ಲಾ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಟ್ವಿಟರಿಗರು ಅಭಿಯಾನ ಕೈಗೊಂಡಿದ್ದಾರೆ.
ಜೂ.5 ರಂದು ಮಧ್ಯಾಹ್ನ ವೇಳೆಗೆ ಮುಲ್ಕಿ ನಗರದಲ್ಲಿ ಗುಂಪೊಂದು ಉದ್ಯಮಿ ಅಬ್ದುಲ್ಲತೀಫ್ ಎಂಬವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿತ್ತು. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿತ್ತು. ಘಟನೆ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣ ಎಲ್ಲಾ ಆರೋಪಿಗಳನ್ನು ಮತ್ತು ಘಟನೆಯ ಹಿಂದಿರುವವರನ್ನು ಬಂಧಿಸಲು ಒತ್ತಾಯಿಸಿ ಟ್ವಿಟರಿಗರು ಅಭಿಯಾನ ನಡೆಸುತ್ತಿದ್ದಾರೆ. #JusticeForAbdulLatheef ಎಂಬ ಹ್ಯಾಷ್ ಟ್ಯಾಗ್ ಬಳಸಿ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಮಂಗಳೂರು ಪೊಲೀಸ್ ಆಯುಕ್ತರ ಸಹಿತ ಹಲವು ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಎಲ್ಲಾ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
"ಆಪತ್ಭಾಂದವ ಅಬ್ದುಲ್ ಲತೀಫ್ ಅವರ ಕೊಲೆಯ ಹಿಂದಿನ ನೈಜ ಕಾರಣವನ್ನು ಆದಷ್ಟು ಬೇಗ ಬೇಧಿಸಬೇಕು. ಹಾಡುಹಗಲೇ ರಾಜರೋಷವಾಗಿ ಇಷ್ಟೊಂದು ಕ್ರೂರವಾಗಿ ಕೊಲೆಗೈಯಲು ಅವರಿಗೆ ಧೈರ್ಯ ಬಂದಿದ್ದು ಅಮಲು ಪದಾರ್ಥ ಸೇವನೆಯಿಂದಲೋ, ಅಥವಾ ಪ್ರಭಾವಿ ವ್ಯಕ್ತಿಗಳ ಕೈವಾಡವೇ?" ಎಂದು ಟ್ವಿಟರಿಗರೊಬ್ಬರು ಪ್ರಶ್ನಿಸಿದ್ದಾರೆ.
"ಬಡವರಿಗೆ ಜಾತಿ ಮತ ನೋಡದೆ ಸಹಾಯ ಮಾಡುತ್ತಿದ್ದ ಅಬ್ದುಲ್ ಲತೀಫ್ ಯಾಕೆ ಕೊಲೆಯಾದರು. ವೈರತ್ವವನ್ನು ಕಟ್ಟಿಕೊಳ್ಳದ ಸ್ನೇಹ ಜೀವಿಗಳಿಗೆಲ್ಲಿಂದ ವೈರಿಗಳು? ಸಂಶಯ, ಸಂದೇಹಗಳಿಗೆ ಕಾರಣಗಳಿವೆ ಈ ಕೊಲೆಯಲ್ಲಿ", "ಆರೋಪಿಗಳಲ್ಲ, ರೂವಾರಿಗಳನ್ನು ಹೆಡೆಮುರಿಕಟ್ಟಿ ಸಮಾಜಕ್ಕೆ ಪರಿಚಯಿಸಬೇಕು. ಆಗಲೇ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು" ಎಂದು ಟ್ವೀಟರಿಗರು ಆಗ್ರಹಿಸಿದ್ದಾರೆ.











