ರಾಜ್ಯಸಭೆ ಚುನಾವಣೆ: ಅಭ್ಯರ್ಥಿಗಳಿಂದ ನಾಳೆ ನಾಮಪತ್ರ ಸಲ್ಲಿಕೆ ಸಾಧ್ಯತೆ

ಬೆಂಗಳೂರು, ಜೂ. 7: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ ತಿಂಗಳ 19ರಂದು ನಡೆಯಲಿರುವ ಚುನಾವಣೆಗೆ ನಾಳೆ (ಜೂ.8) ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.
ನಾಮಪತ್ರ ಸಲ್ಲಿಕೆಗೆ ಜೂ.9 ಕೊನೆಯ ದಿನವಾಗಿದ್ದು, ಬಹುತೇಕ ಅಭ್ಯರ್ಥಿಗಳ ಜೂ.8ರಂದೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಕಟಿಸಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ಇದುವರೆಗೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.
ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ಬಹುತೇಕ ಅಭ್ಯರ್ಥಿಗಳು ಜೂ.8ರಂದೇ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ. ಜೆಡಿಎಸ್‍ನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕಣಕ್ಕಿಳಿಸಲು ಶಾಸಕಾಂಗ ಪಕ್ಷದ ಸಭೆ ತೀರ್ಮಾನ ಮಾಡಿದೆ. ಆದರೆ, ಈವರೆಗೂ ದೇವೇಗೌಡರು ತಮ್ಮ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ಗೊತ್ತಾಗಿದೆ.
ಬಿಜೆಪಿಯಿಂದ ಉದ್ಯಮಿ ಪ್ರಕಾಶ್ ಶೆಟ್ಟಿ, ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಪ್ರಭಾಕರ್ ಕೋರೆ ಅವರ ಹೆಸರಿನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡಿದೆ. ನಾಳೆಯೊಳಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿದ್ದು, ಯಾರು ಅಭ್ಯರ್ಥಿಯಾಗಲಿದ್ದಾರೆಂಬುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಜೂ.10ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂ.12 ಕೊನೆಯ ದಿನವಾಗಿದೆ. ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಜೂ.19ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಫಲಿತಾಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.







