ಡಿಜಿಟಲ್ ಮೂಲಸೌಕರ್ಯ ಕೊರತೆಯಿಂದ ಮಕ್ಕಳಿಗೆ ಆನ್‌ಲೈನ್ ತರಗತಿಗಳು ದುಃಸ್ವಪ್ನಗಳಾಗಲಿವೆ: ತಜ್ಞರ ಎಚ್ಚರಿಕೆ

ಹೊಸದಿಲ್ಲಿ,ಜೂ.7: ಕೊರೋನ ವೈರಸ್ ಮಹಾಮಾರಿಯು ಆನ್‌ಲೈನ್ ತರಗತಿಗಳ ಮೂಲಕ ಶಿಕ್ಷಣವನ್ನು ಅನಿವಾರ್ಯ ವಾಗಿಸಿರಬಹುದು,ಆದರೆ ದೇಶದಲ್ಲಿ ಡಿಜಿಟಲ್ ಮೂಲಸೌಕರ್ಯ ಕೊರತೆಯಿಂದಾಗಿ ಈ ಯೋಜನೆಯು ಹೆಚ್ಚಿನ ಮಕ್ಕಳ ಪಾಲಿಗೆ ದುಃಸ್ವಪ್ನವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಇಲ್ಲದ್ದರಿಂದ ಕೇರಳದಲ್ಲಿ ಶಾಲಾಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೂರ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳು ಇಂಟರ್‌ನೆಟ್ ಅನ್ನು ಪಡೆಯಲು ಮನೆಗಳ ಛಾವಣಿಗಳ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಒಂದಕ್ಕೂ ಹೆಚ್ಚಿನ ಮಕ್ಕಳಿರುವ ಮನೆಗಳಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಹೆತ್ತವರ ಸ್ಮಾರ್ಟ್‌ಫೋನ್‌ಗಾಗಿ ಅವರಲ್ಲಿಯೇ ಪೈಪೋಟಿ,ಕಿತ್ತಾಟ ಏರ್ಪಟ್ಟಿದೆ. ಇವೆಲ್ಲ ಈಗಿನ ಡಿಜಿಟಲ್ ವಿಭಜನೆ ಅಥವಾ ಮೂಲಸೌಕರ್ಯ ಕೊರತೆಯ ಕೆಲವು ನಿದರ್ಶನಗಳಾಗಿವೆ ಎಂದು ಈ ತಜ್ಞರು ಬೆಟ್ಟು ಮಾಡಿದ್ದಾರೆ.
2017-18ನೇ ಸಾಲಿನ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಧಾರಿತ ವರದಿಯಂತೆ ನಗರ ಪ್ರದೇಶಗಳಲ್ಲಿಯ ಶೇ.42ರಷ್ಟು ಕುಟುಂಬಗಳಿಗೆ ಹೋಲಿಸಿದರೆ ಗ್ರಾಮೀಣ ಭಾರತದಲ್ಲಿ ಶೇ.15ಕ್ಕೂ ಕಡಿಮೆ ಕುಟುಂಬಗಳು ಇಂಟರ್ನೆಟ್ ಸೌಲಭ್ಯವನ್ನು ಹೊಂದಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆಗೊಳಗಾದ ಐದು ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಶೇ.13ರಷ್ಟು ಯುವತಿಯರಲ್ಲಿ ಕೇವಲ ಶೇ.8.5ರಷ್ಟ್ಟು ಹೆಣ್ಣುಮಕ್ಕಳು ಅಂತರ್ಜಾಲವನ್ನು ಬಳಸಬಲ್ಲರು. ಕಡುಬಡತನದಲ್ಲಿರುವ ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್ ಅಥವಾ ಅಂತರ್ಜಾಲ ಸಂಪರ್ಕವನ್ನು ಕೊಡಿಸುವಷ್ಟು ಚೈತನ್ಯವಿಲ್ಲ ಎಂದೂ ಸಮೀಕ್ಷೆಯು ಹೇಳಿದೆ.
ಕೊರೋನ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಲಾಕಾಲೇಜುಗಳನ್ನು ಮಾ.16ರಿಂದ ಮುಚ್ಚಲಾಗಿದೆ. ಮಾ.24ರಂದು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಲಾಗಿದ್ದು,ಮರುದಿನದಿಂದಲೇ ಅದು ಜಾರಿಗೊಂಡಿತ್ತು.
ಅಧಿಕೃತ ಅಂಕಿಅಂಶಗಳಂತೆ ದೇಶದಲ್ಲಿ 35 ಕೋಟಿಗೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅದರ ಅವರಲ್ಲಿ ಎಷ್ಟು ಜನರ ಬಳಿ ಡಿಜಿಟಲ್ ಸಾಧನಗಳು ಮತ್ತು ಅಂತರ್ಜಾಲ ಸಂಪರ್ಕವಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಸರಕಾರವು ಲಾಕಡೌನ್ ಅನ್ನು ಬಹುಮಟ್ಟಿಗೆ ಸಡಿಲಿಸಿದೆಯಾದರೂ ಶಾಲಾಕಾಲೇಜುಗಳು ಇನ್ನೂ ಮುಚ್ಚಿಯೇ ಇವೆ.
ಶಾಲಾ ಶಿಕ್ಷಣವು ಸಂಪೂರ್ಣವಾಗಿ ಅಮಾನತುಗೊಳ್ಳದಂತಾಗಲು ನಾವು ಬೋಧನೆಗಾಗಿ ಮತ್ತು ಕಲಿಯುವಿಕೆಗಾಗಿ ಆನ್‌ಲೈನ್‌ನತ್ತ ಹೊರಳಿರುವುದು ಒಳ್ಳೆಯದೇ. ಆದರೆ ಇದಕ್ಕೆ ಇನ್ನೊಂದು ಮುಖವೂ ಉಂಟು. ಜಗತ್ತೇ ಇಂದು ಒಳಾಂಗಣದತ್ತ ಸಾಗಿರುವಾಗ ಮತ್ತು ತಂತ್ರಜ್ಞಾನವು ಪ್ರಮುಖಪಾತ್ರವನ್ನು ವಹಿಸುತ್ತಿರುವಾಗ ಡಿಜಿಟಲ್ ಮೂಲಸೌಕರ್ಯಗಳ ಕೊರತೆಯು ಅಸಹಾಯಕ ಮಕ್ಕಳನ್ನು ಮೂಲೆಗೆ ತಳ್ಳುತ್ತಿದೆ. ಶೀಘ್ರವೇ ಅಥವಾ ನಂತರವಾದರೂ ಅವರು ಸ್ಪರ್ಧೆಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿದ ದಿಲ್ಲಿ ವಿವಿಯ ಪ್ರೊಫೆಸರ್‌ವೋರ್ವರು,‘ಗ್ರಾಮೀಣ ಭಾರತದಲ್ಲಿಯ ಅಥವಾ ನಗರ ಪ್ರದೇಶಗಳ ಬಡಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳು ಇಂತಹ ಸೇವೆಗಳನ್ನು ಬಳಸಿಕೊಳ್ಳುವಲ್ಲಿ ತುಂಬ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಮತ್ತು ಈ ಸಮಸ್ಯೆಯನ್ನು ನಿವಾರಿಸಲು ನಮ್ಮ ಬಳಿ ಯಾವುದೇ ನೀತಿಯಿಲ್ಲ. ಒಂದು ರೀತಿಯಲ್ಲಿ ನಾವು ಆನ್‌ಲೈನ್ ಶಿಕ್ಷಣದ ದುಃಸ್ವಪ್ನದತ್ತ ಸಾಗುತ್ತಿದ್ದೇವೆ ’ಎಂದರು.
ಶಿಕ್ಷಣವು ಸಮಾನತೆಯನ್ನು ಸೃಷ್ಟಿಸುವ ಬೃಹತ್ ಸಾಧನವಾಗಿದೆ,ಆದರೆ ಕೊರೋನ ವೈರಸ್ ಬಿಕ್ಕಟ್ಟು ಇದಕ್ಕೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಶಾಲಾಕಾಲೇಜುಗಳು ಆನ್‌ಲೈನ್ ಮಾರ್ಗದಲ್ಲಿ ಮುಂದುವರಿದರೆ ಡಿಜಿಟಲ್ ಸೌಲಭ್ಯಗಳಿಲ್ಲದ ವಿದ್ಯಾರ್ಥಿಗಳು ಶಿಕ್ಷಣವನ್ನೇ ತೊರೆಯುವಂತಾಗುತ್ತದೆ ಎಂದು ಕಿರೋರಿಮಲ್ ಕಾಲೇಜಿನ ಪ್ರೊ.ಸಂಗೀತಾ ಗಾದ್ರೆ ಹೇಳಿದರು.
ಶಿಕ್ಷಣದ ಮರು ಪರಿಕಲ್ಪನೆ ಕುರಿತು ವರ್ಚುವಲ್ ಸಮಾವೇಶದಲ್ಲಿ ಭಾಗಿಯಾಗಿದ್ದ ಇನ್ಫೋಸಿಸ್ ಅಧ್ಯಕ್ಷ ನಂದನ ನಿಲೇಕಣಿ ಅವರೂ ಮೂಲಸೌಕರ್ಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರಾದರೂ,ವಿದ್ಯಾರ್ಥಿಗಳ ಬಳಿ ಡಿಜಿಟಲ್ ಸಾಧನಗಳಿಲ್ಲದಿರಬಹುದು,ಆದರೆ ಅವರು ಅಂತಹ ಸಾಧನಗಳನ್ನು ಹೊಂದಿರುವ ಡಿಜಿಟಲ್ ಸೇವಾ ಕೇಂದ್ರಗಳಿಗೆ ಹತ್ತಿರದಲ್ಲಿರಬಹುದು ಮತ್ತು ಅವರು ಅವುಗಳ ನೆರವು ಪಡೆದುಕೊಳ್ಳಬಹುದಾಗಿದೆ. ನಾವು ಇಂತಹ ಸಾಧ್ಯತೆಗಳನ್ನು ಆವಿಷ್ಕರಿಸಬೇಕಿದೆ ಎಂದರು.







