ಕೊರೋನ ಸೋಂಕು : ತೆಲಂಗಾಣ ಪತ್ರಕರ್ತ ಬಲಿ
ಹೈದರಾಬಾದ್ : ತೆಲುಗು ಟಿವಿ ಚಾನಲ್ ಒಂದರ ಪತ್ರಕರ್ತರೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿರುವ ಘಟನೆ ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ.
33 ವರ್ಷ ವಯಸ್ಸಿನ ಈ ಪತ್ರಕರ್ತನನ್ನು ಜೂನ್ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನಿಗೆ ಬೈಲ್ಯಾಟರಲ್ ನ್ಯುಮೋನಿಯಾ ಹಾಗೂ ಟೈಪ್-1 ಉಸಿರಾಟ ವೈಫಲ್ಯ ಹಾಗೂ ತೀವ್ರ ಉಸಿರಾಟ ಕಾಯಿಲೆ ಲಕ್ಷಣ (ಎಆರ್ಡಿಎಸ್) ಕಂಡುಬಂದಿತ್ತು ಎಂದು ವೈದ್ಯರು ಹೇಳಿದ್ದಾರೆ.
ನರ ಮತ್ತು ಮಾಂಸಖಂಡದ ಸಮಸ್ಯೆಯಿಂದಲೂ ಆತ ಬಳಲುತ್ತಿದ್ದ ಎಂದು ಹೇಳಲಾಗಿದೆ. ಇದರಿಂದಾಗಿ ಅಸ್ಥಿಪಂಜರ ಮತ್ತು ಮಾಂಸಖಂಡ ದೌರ್ಬಲ್ಯ ಉಂಟಾಗಿತ್ತು ಎಂದು ವಿವರಿಸಿದ್ದಾರೆ.
ವೈದ್ಯರ ತಂಡ ನಿಯತವಾಗಿ ಅವರ ಆರೈಕೆಯಲ್ಲಿ ತೊಡಗಿತ್ತು. ನಾನು ಕೂಡಾ ಪದೇ ಪದೇ ಭೇಟಿ ನೀಡುತ್ತಿದ್ದೆ. ಆದರೆ ಇಂದು ಮುಂಜಾನೆ ಹೃದಯಾಘಾತ ಸಂಭವಿಸಿದ್ದು, ಬೆಳಗ್ಗೆ 9.37ಕ್ಕೆ ಕೊನೆಯುಸಿರೆಳೆದರು ಎಂದು ಗಾಂಧಿ ಆಸ್ಪತ್ರೆಯ ಅಧೀಕ್ಷಕ ಡಾ.ಎಂ.ರಾಜಾರಾವ್ ವಿವರಿಸಿದ್ದಾರೆ.
ಕಳೆದ ವಾರ ರಾಜ್ಯದಲ್ಲಿ 13 ಪತ್ರಕರ್ತರಿಗೆ ಕೊರೋನ ಪಾಸಿಟಿವ್ ಕಂಡುಬಂದಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.