ಸರಕಾರ ಖಲಿಸ್ತಾನ್ ಆಫರ್ ಮಾಡಿದರೆ ಸಿಖ್ಖರು ಸ್ವೀಕರಿಸುತ್ತಾರೆ : ಅಕಾಲ್ ತಖ್ತ್ ಮುಖ್ಯಸ್ಥ
ಅಮೃತಸರ್: “ಎಲ್ಲ ಸಿಖ್ಖರಿಗೂ ಖಲಿಸ್ತಾನ ಬೇಕು. ಭಾರತ ಅದನ್ನು ಸಿಖ್ಖರಿಗೆ ಆಫರ್ ಮಾಡಿದರೆ ಅವರು ಅದನ್ನು ಸ್ವೀಕರಿಸುತ್ತಾರೆ'' ಎಂದು ಅಕಾಲ್ ತಖ್ತ್ನ ಹಂಗಾಮಿ ಜತ್ತೇದಾರ್ ಗ್ಯಾನಿ ಹರ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಆಪರೇಷನ್ ಬ್ಲೂಸ್ಟಾರ್ ನ 36ನೇ ವರ್ಷದ ಸಂದರ್ಭ ಮಾಧ್ಯಮ ಮಂದಿ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, “ಸಿಖ್ ಯುವಕರು ಖಲಿಸ್ತಾನವನ್ನು ಹೊಗಳಿ ಘೋಷಣೆಗಳನ್ನು ಕೂಗಿದರೆ ತೊಂದರೆಯೇನಿಲ್ಲ'' ಎಂದರು.
ಸಿಖರ ಉನ್ನತ ಸಂಘಟನೆಗಳಾದ ಐದು ತಖ್ತ್ಗಳಲ್ಲಿ ಅಕಾಲ್ ತಖ್ತ್ ಪರಮೋಚ್ಛ ಸಂಘಟನೆಯಾಗಿದೆ. ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಅಧ್ಯಕ್ಷ ಗೋಬಿಂದ್ ಸಿಂಗ್ ಲೊಂಗೊವಾಲ್ ಕೂಡ ಗ್ಯಾನಿ ಹರ್ಪ್ರೀತ್ ಸಿಂಗ್ ಅವರ ನಿಲುವನ್ನು ಸಮರ್ಥಿಸಿದ್ದಾರೆ.
ಸಿಖ್ ಪ್ರತ್ಯೇಕತಾವಾದಿಗಳು ಹಾಗೂ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆನ್ನಲಾದ ತೀವ್ರಗಾಮಿ ಸಿಖ್ ಸಂಘಟನೆ ದಲ್ ಖಲ್ಸಾದ ಗಜಿಂದರ್ ಸಿಂಗ್ ಕೂಡ ಈ ಕುರಿತಂತೆ ಫೇಸ್ ಬುಕ್ ಪೋಸ್ಟ್ ಮಾಡಿ, “ಇಂದು ಅಕಾಲ್ ತಖ್ತ್ ಸಾಹಿಬ್ ನಾಯಕ ತಮ್ಮದೇ ಶೈಲಿಯಲ್ಲಿ ಖಲಿಸ್ತಾನ್ ಅನ್ನು ಬೆಂಬಲಿಸಿದ್ದಾರೆ. ಅವರ ಹೇಳಿಕೆಯನ್ನು ರಕ್ಷಿಸಲು ದೇವರು ನಮಗೆ ಸಾಮರ್ಥ್ಯ ಕರುಣಿಸಲಿ,'' ಎಂದು ಬರೆದಿದ್ದಾರೆ.
ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿದ ಪಂಜಾಬ್ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುನಿಲ್ ಜಖರ್, ಉನ್ನತ ಹುದ್ದೆಯಲ್ಲಿರುವವರು ಅದರ ಜತೆಗಿರುವ ಜವಾಬ್ದಾರಿಯನ್ನೂ ಅರಿಯಬೇಕು ಎಂದಿದ್ದಾರೆ.
“ಜವಾಬ್ದಾರಿಯುತ ಸ್ಥಾನದಲ್ಲಿರುವವರೊಬ್ಬರು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ ರೀತಿಯಲ್ಲಿ ಹೇಳಿಕೆ ನೀಡಬಾರದು'' ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮ ಹೇಳಿದ್ದಾರೆ.