ದ.ಕ.ಜಿಲ್ಲೆ: ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
ಮಂಗಳೂರು, ಜೂ.8: ಕೊರೋನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಸಡಿಲಿಕೆಯ ಬಳಿಕ ಸೋಮವಾರ ನಗರ ಸಹಿತ ದ.ಕ.ಜಿಲ್ಲೆಯ ವಿವಿಧ ಕಡೆ ಸಂಚರಿಸುತ್ತಿದ್ದ ಸರಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂತು.
ಮಾ.22ರಿಂದ ಮೇ 31ರವರೆಗೆ ಸಂಚಾರ ಆರಂಭಿಸದಿದ್ದ ಸರಕಾರಿ ಮತ್ತು ಖಾಸಗಿ ಬಸ್‌ಗಳ ಪೈಕಿ ಕೆಲವು ಬಸ್‌ಗಳು ಜೂ.1ರಿಂದ ಸಂಚಾರ ಆರಂಭಿಸಿತ್ತು. ಆದರೆ ಕಳೆದ ಒಂದು ವಾರದಲ್ಲಿ ಪ್ರಯಾಣಿಕರ ಸಂಖ್ಯೆಯು ತೀರಾ ಕಡಿಮೆಯಾದ ಕಾರಣ ಬಸ್ ಮಾಲಕರು ಭಾರೀ ನಷ್ಟ ಅನುಭವಿಸಿದ್ದರು. ಸೋಮವಾರದಿಂದ ಧಾರ್ಮಿಕ ಕೇಂದ್ರಗಳು, ಹೊಟೇಲುಗಳು, ಮಾಲ್‌ಗಳು ತೆರೆಯುವುದರೊಂದಿಗೆ ಬಸ್‌ಗಳಲ್ಲಿ ಕೂಡ ಪ್ರಯಾಣಿಕರ ಸಂಖ್ಯೆಯಲ್ಲಿ ತುಸು ಹೆಚ್ಚಳ ಕಂಡು ಬಂತು. ಕೆಲವು ರೂಟ್‌ಗಳಲ್ಲೂ ಹೆಚ್ಚು ಬಸ್ಸುಗಳು ಓಡಾಡುತ್ತಿದ್ದುದು ಕಂಡಿತು.
ಆದರೆ ಬಹುತೇಕ ಸರಕಾರಿ ಮತ್ತು ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಓಡಾಟ ನಡೆಸುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಓಡಾಟ ನಡೆಸುತ್ತಿವೆ ಎಂದು ಬಸ್ ಮಾಲಕರು ತಿಳಿಸಿದ್ದಾರೆ. ಈ ಮಧ್ಯೆ ಸಂಚಾರ ಪೊಲೀಸರು ಓವರ್‌ಲೋಡ್ ನೆಪದಲ್ಲಿ ಬಸ್ಸುಗಳಿಗೆ ತಲಾ 200 ರೂ.ನಂತೆ ದಂಡ ವಿಧಿಸಲು ಆರಂಭಿಸಿದ್ದಾರೆ.





