ಪಕ್ಷನಿಷ್ಟೆಗೆ ಸಂದ ಗೌರವ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಈರಣ್ಣ ಕಡಾಡಿ ಪರಿಚಯ

ಬೆಂಗಳೂರು: ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಈರಣ್ಣ ಕಡಾಡಿಯವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಬಿಜೆಪಿಯ ಈ ಅಚ್ಚರಿಯ ಆಯ್ಕೆ ಪಕ್ಷನಿಷ್ಟೆಗೆ ಸಂದ ಗೌರವವಾಗಿದೆ.
ಈರಣ್ಣ ಕಡಾಡಿ:
ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ 01-06-1966ರಂದು ಜನಿಸಿದ ಈರಣ್ಣ ಕಡಾಡಿ 1989ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಅವರು, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿದ ಈರಣ್ಣ ಕಡಾಡಿ 1994ರಲ್ಲಿ ಅರಭಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ನ ಮಾಜಿ ಸಚಿವ ವಿ.ಎಸ್.ಕೌಜಲಗಿ ವಿರುದ್ಧ ಪರಾಭವಗೊಂಡಿದ್ದರು.
2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಅವರು, 2010ರಲ್ಲಿ ಬೆಳಗಾವಿ ಜಿ.ಪಂ. ಅಧ್ಯಕ್ಷರಾಗಿದ್ದರು. ಮೊದಲಿನಿಂದಲೂ ಆರೆಸ್ಸೆಸ್ ನಲ್ಲಿ ಗುರುತಿಸಿಕೊಂಡಿರುವ ಅವರು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸದ್ಯ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.







