ಮೂಡ ಅಧ್ಯಕ್ಷರಾಗಿ ರವಿಶಂಕರ್ ಮಿಜಾರು ಅಧಿಕಾರ ಸ್ವೀಕಾರ

ಮಂಗಳೂರು, ಜೂ.8: ಮೂಡಾದಿಂದ ಜನರಿಗೆ ನೀಡಲಾಗುವ ಏಕ ನಿವೇಶನ, ವಿನ್ಯಾಸ ಅನುಮೋದನೆ, ಭೂ ಪರಿವರ್ತನೆ, ವಲಯ ದೃಢೀಕರಣ ಸಹಿತ ಎಲ್ಲ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಮುಡಾ ನೂತನ ಅಧ್ಯಕ್ಷ ರವಿಶಂಕರ್ ಮಿಜಾರ್ ತಿಳಿಸಿದ್ದಾರೆ.
ಮುಡಾ ಕಚೇರಿಯಲ್ಲಿ ಇಂದು ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರುಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಹಾ ಯೋಜನೆ -2ರ ಅವಧಿ 2021ಕ್ಕೆ ಪೂರ್ಣವಾಗಲಿದೆ. ಮಹಾ ಯೋಜನೆ-3ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಈ ಯೋಜನೆಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಮಂಗಳೂರು ನಗರದ ಮುಂದಿನ 30 ವರ್ಷದ ಬೆಳವಣಿಗೆ ಗಮನದಲ್ಲಿರಿಸಿ ಮಹಾ ಯೋಜನೆ-3ರ ಸಿದ್ಧತೆ ನಡೆದಿದೆ ಎಂದರು.
ಕೊಣಾಜೆಯ 13.5 ಎಕರೆ ಜಮೀನಿನಲ್ಲಿ ಬಡಾವಣೆ ರಚನೆಯಾಗುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ.ಚೇಳ್ಯಾರಿನ 45 ಎಕರೆ ಜಮೀನಿನಲ್ಲಿ ಬಡಾವಣೆ ರಚಿಸುವ ಪ್ರಕ್ರಿಯೆ ಆರಂಭವಾಗಿದೆ. ಆದಷ್ಟು ಶೀಘ್ರ ಬಡಾವಣೆ ಅಭಿವೃದ್ದಿ ಪಡಿಸಿ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪ್ರಾಧಿಕಾರದ ವ್ಯಾಪ್ತಿಯ ಪ್ರಾಚೀನ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 2 ಕೆರೆಗಳ ಅಭಿವೃದ್ದಿ ಕಾರ್ಯ ನಡೆದಿದ್ದು, 6 ಕೆರೆಗಳ ಅಭಿವೃದ್ದಿ ಕಾರ್ಯ ಪ್ರಗತಿಯಲ್ಲಿದೆ. ಇನ್ನು 10 ಕೆರೆಗಳನ್ನು ಅಭಿವೃದ್ದಿ ಪಡಿಸುವ ಚಿಂತನೆ ಇದೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಕನಿಷ್ಠ ಒಂದು ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮುಡಾ ಆಯುಕ್ತ ದಿನೇಶ್ ಕುಮಾರ್, ಕಾರ್ಪೋರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ರಾಮದಾಸ್ ಬಂಟ್ವಾಳ, ಜಿತೇಂದ್ರ ಕೊಟ್ಟಾರಿ, ಜಗದೀಶ ಶೇಣವ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರಿನ 3 ಪ್ರದೇಶಗಳಲ್ಲಿ ಟೆಕ್ನಾಲಜಿ ಪಾರ್ಕ್
ಮಂಗಳೂರಿನಲ್ಲೇ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಗರದ 3 ಪ್ರದೇಶದಲ್ಲಿ ಟೆಕ್ನಾಲಜಿ ಪಾರ್ಕ್ ನಿರ್ಮಿಸಲು ಪ್ರಯತ್ನಿ ಸಲಾಗುವುದು. ಉಳ್ಳಾಲ ಸೇತುವೆಯ 2 ಬದಿಯಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.







