ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ಬೇರೆ ಪಕ್ಷಗಳ ನಾಯಕರಿಂದಲೂ ಒತ್ತಡ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜೂ.8: ಮಲ್ಲಿಕಾರ್ಜುನ ಖರ್ಗೆ ಕೇವಲ ರಾಜ್ಯಕ್ಕೆ ಸೀಮಿತವಾದ ನಾಯಕರಲ್ಲ. ರಾಷ್ಟ್ರಕ್ಕೆ ಸೀಮಿತವಾದ ನಾಯಕ. ಅವರಲ್ಲಿ ರಾಷ್ಟ್ರ ನಾಯಕನ ಗುಣಗಳಿವೆ. ಹೀಗಾಗಿ ಅವರು ರಾಷ್ಟ್ರದ ಆಸ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಕಾಲ ಅವರು ವಿರೋಧ ಪಕ್ಷದಲ್ಲಿದ್ದು ಮಾಡಿದ ಕಾರ್ಯ ಹಾಗೂ ಅವರ ಅನುಭವ ಅತ್ಯುತ್ತಮವಾದುದು. ಅದಕ್ಕೆ ಪರ್ಯಾಯವಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯ ನೋಡಿ ದೇಶದ ಮೂಲೆ ಮೂಲೆಯಿಂದ ಬೇರೆ ಪಕ್ಷಗಳ ನಾಯಕರೂ ಕೂಡ ಖರ್ಗೆ ಅವರನ್ನು ರಾಜ್ಯಸಭೆಯಿಂದ ಆರಿಸಿ ಸಂಸತ್ತಿಗೆ ಕಳುಹಿಸಬೇಕು ಎಂದು ಒತ್ತಡ ಹಾಕಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದಿಂದ ಆಯ್ಕೆಯಾಗುವ ಖರ್ಗೆ ಅವರು ರಾಷ್ಟ್ರದ ಎಲ್ಲ ವರ್ಗದ ಜನರ ಸಮಸ್ಯೆಗೆ ಧ್ವನಿಯಾಗಿ ಹೋರಾಟ ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ನಮ್ಮ ಪಕ್ಷಕ್ಕೆ ಶಕ್ತಿಯಾಗಿರುವ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶ ಮಾಡಿಕೊಟ್ಟ ನಮ್ಮ ನಾಯಕಿ ಸೋನಿಯಾ ಗಾಂಧಿ ಅವರಿಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ ಎಲ್ಲ ಶಾಸಕರು ಅಭಿನಂದನೆ ಸಲ್ಲಿಸಲು ತಿರ್ಮಾನಿಸಿದ್ದು, ಇದನ್ನು ಅವರಿಗೆ ಕಳುಹಿಸಿಕೊಡುತ್ತೇವೆ ಎಂದು ಅವರು ಹೇಳಿದರು.
ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಬೆಂಬಲಿಸುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಈ ವಿಚಾರದಲ್ಲಿ ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತೆಗೆದುಕೊಳ್ಳುವ ವಿಚಾರದಲ್ಲಿ ನಾವು ಸ್ಥಳೀಯ ನಾಯಕರು ಆಕ್ಷೇಪ ಮಾಡುವುದಿಲ್ಲ. ಅವರು ನಮ್ಮ ಜತೆ ಚರ್ಚೆ ಮಾಡಿದ್ದಾರೆ ಎಂದರು.







