ನಾಲ್ವಡಿ ಅವರ ಬಗ್ಗೆ ಗೊತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ: ಇತಿಹಾಸ ತಜ್ಞ ಪ್ರೊ.ನಂಜರಾಜೆ ಅರಸ್

ಮೈಸೂರು,ಜೂ.8: ಇತಿಹಾಸ ಗೊತ್ತಿಲ್ಲದವರು ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡುತಿದ್ದಾರೆ. ನಾಲ್ವಡಿ ಅವರ ಬಗ್ಗೆ ಗೊತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ. ನಾವು ಹೇಳುವುದು ಸುಳ್ಳು ಎನ್ನುವುದಾದರೆ ನಮ್ಮ ಹೋರಾಟವನ್ನು ಹಿಂಪಡೆಯುತ್ತೇವೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಸವಾಲು ಹಾಕಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇತಿಹಾಸ ಗೊತ್ತಿಲ್ಲದವರು ರವಿವಾರ ಪತ್ರಿಕಾಗೋಷ್ಠಿ ನಡೆಸಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಕ್ಕದಲ್ಲಿ ನಿರ್ಮಾಣ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅವರಿಗೆ ನಿಜವಾಗಲು ಇತಿಹಾಸ ಗೊತ್ತಿದ್ದರೆ ಚರ್ಚೆಗೆ ಬರಲಿ. ನಮ್ಮದು ಸುಳ್ಳು ಎನ್ನುವುದಾದರೆ ನಾವು ಹೋರಾಟದಿಂದ ಹಿಂದೆ ಸರಿಯುತ್ತೇವೆ ಎಂದು ಹೇಳಿದರು.
ಹೋಟೆಲ್ ನಡೆಸುವವರು, ಬಾರ್ ಮಾಲಕರು ವಿಶ್ವೇಶ್ವರಯ್ಯ ಅವರನ್ನು ಸಮರ್ಥಿಸಿಕೊಳ್ಳುತಿದ್ದಾರೆ. ನಾಲ್ವಡಿ ಅವರ ಮುಂದೆ ವಿಶ್ವೇಶ್ವರಯ್ಯ ಏನೇನೂ ಇಲ್ಲ, ನಾಲ್ವಡಿ ಅವರ ದೂರದೃಷ್ಟಿಯಿಂದ ಇಂದು ಕೋಟ್ಯಂತರ ಜನ ಜೀವನ ನಡೆಸುತಿದ್ದಾರೆ. ಇತಿಹಾಸವನ್ನು ಕೆಲವರು ತಿರುಚಿ ಕನ್ನಂಬಾಡಿಯನ್ನು ವಿಶ್ವೇಶ್ವರಯ್ಯ ಕಟ್ಟಿದರು ಎಂದು ಸಮರ್ಥಿಸಿಕೊಂಡು ಸುಳ್ಳನ್ನು ವೈಭವೀಕರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ದಿವಾನರಾಗಿದ್ದ ವೇಳೆ ಲ್ಯಾಟಿನ್ ಬೆಳಕಿನಲ್ಲಿ ಓದುತ್ತಿದ್ದರು ಎಂದು ಹೇಳುತ್ತಾರೆ. ವಿಶ್ವೇಶ್ವರಯ್ಯ 1912 ನಂತರ ದಿವಾನರಾಗಿದ್ದರು. ನಾಲ್ವಡಿ ಅವರ ಪರಿಶ್ರಮದಿಂದ ಶಿಂಷಾದಲ್ಲಿ ವಿದ್ಯುತ್ ತಯಾರು ಘಟಕ 1902 ರಲ್ಲಿ ಪ್ರಾರಂಭವಾಯಿತು. ಬೆಂಗಳೂರಿಗೆ 1905 ರಲ್ಲಿ ವಿದ್ಯುತ್ ಬಂತು. ಮೈಸೂರಿಗೆ 1907 ರಲ್ಲಿ ವಿದ್ಯುತ್ ಬಂತು. ಹಾಗಿದ್ದ ಮೇಲೆ ದಿವಾನರಾಗಿದ್ದ ವಿಶ್ವೇಶ್ವರಯ್ಯ ಇನ್ನೂ ಲ್ಯಾಟಿನ್ ಬೆಳಕಿನಲ್ಲೇ ಓದುತ್ತಿದ್ದರೇ ಎಂದು ಪ್ರಶ್ನಿಸಿದರು.
ನಾವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ನಾವು ಮಾಡಿರುವ ಮನವಿ ಸುಳ್ಳು ಎಂದಾದರೆ ನಮ್ಮ ಹೋರಾಟವನ್ನು ನಿಲ್ಲಿಸುತ್ತೇವೆ ಎಂದ ಅವರು, ಮುಖ್ಯಂತ್ರಿಗಳನ್ನು ಭೇಟಿ ಮಾಡಿ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುತ್ತೇವೆ. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯಂತ್ರಿಗಳ ಭೇಟಿಗೆ ಕಾಲಾವಕಾಶ ಕೊಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.







