ಬ್ರಿಟನ್‌ನಲ್ಲಿ ತಣಿಯದ ಪ್ರತಿಭಟನೆಯ ಕಾವು: ಲಂಡನ್‌ನಲ್ಲಿ ಚರ್ಚಿಲ್ ಪ್ರತಿಮೆ ವಿರೂಪ

ಲಂಡನ್,ಜೂ.8: ಜಾರ್ಜ್‌ಫ್ಲಾಯ್ಡ್ ಸಾವನ್ನು ಪ್ರತಿಭಟಿಸಿ ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ರವಿವಾರ ನಡೆದ ‘ಬ್ಲಾಕ್‌ಲೈವ್ಸ್ ಮ್ಯಾಟರ್’ ರ್ಯಾಲಿಯ ವೇಳೆ ಜನಾಂಗೀಯವಾದ ವಿರೋಧಿ ಪ್ರತಿಭಟನಕಾರರು ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಸ್ಮಾರಕವನ್ನು ವಿರೂಪಗೊಳಿಸಿರುವುದಾಗಿ ವರದಿಯಾಗಿದೆ.
ರವಿವಾರ ಸಂಸತ್‌ಭವನದ ಚೌಕದ ಬಳಿ ಜಮಾಯಿಸಿದ ಸಾವಿರಾರು ಮಂದಿ ವಿನ್‌ಸ್ಟನ್‌ಚರ್ಚಿಲ್ ಪ್ರತಿಮೆಯ ಮೇಲೆ ‘ಜನಾಂಗೀಯವಾದಿ’ ಎಂಬ ಬರಹವನ್ನು ಗೀಚಿದರು.
ಸ್ಮಾರಕವನ್ನು ಸುತ್ತುವರಿದ ಪ್ರತಿಭಟನಕಾರರು ಚರ್ಚಿಲ್ ಜನಾಂಗೀಯವಾದಿಯೆಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಕೆಲವರು ಮಧ್ಯಪ್ರವೇಶಿಸಿ ಸ್ಮಾರಕವನ್ನು ರಕ್ಷಿಸಲು ಯತ್ನಿಸಿದರು.
ರವಿವಾರ ಲಂಡನ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಹೊರಗಿನ ರಸ್ತೆಗಳಲ್ಲಿ ನಡೆದ ಬ್ಲಾಕ್‌ಲೈವ್ಸ್ ಮ್ಯಾಟರ್ ರ್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮ್ಯಾಂಚೆಸ್ಟರ್, ಎಡಿನ್‌ಬರೋ ಹಾಗೂ ಬ್ರಿಸ್ಟಲ್ ನಗರಗಳಲ್ಲಿಯೂ ಪ್ರತಿಭಟನ ರ್ಯಾಲಿಗಳು ನಡೆದವು.
ನೈಋತ್ಯ ಬ್ರಿಟನ್‌ನ ನಗರವಾದ ಬ್ರಿಸ್ಟಲ್‌ನಲ್ಲಿ 17ನೇ ಶತಮಾನದ ಗುಲಾಮರ ವರ್ತಕ ಎಡ್ವರ್ಡ್ ಕೊಲ್‌ಸ್ಟನ್‌ನ ಪ್ರತಿಮೆಯನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ್ದಾರೆ
ಪ್ರತಿಮೆ ಧ್ವಂಸದ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 1895ರಲ್ಲಿ ಬ್ರಿಸ್ಟಲ್‌ನ ನಗರ ಮಧ್ಯೆ ಸ್ಥಾಪಿಸಲಾಗಿದ್ದ ಕೊಲ್‌ಸ್ಟನ್‌ನ ಪ್ರತಿಮೆ ಇತ್ತೀಚಿನ ವರ್ಷಗಳಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಗುಲಾಮರ ವ್ಯಾಪಾರಿಯ ಪ್ರತಿಮೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಹಲವಾರು ಮಂದಿ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು.







