ಉಡುಪಿ: ನಾಲ್ವರು ಮಕ್ಕಳು ಸೇರಿ 45 ಮಂದಿಯಲ್ಲಿ ಕೊರೋನ ಪಾಸಿಟಿವ್
ಸೋಂಕಿತರ ಒಟ್ಟು ಸಂಖ್ಯೆ 946ಕ್ಕೆ ಏರಿಕೆ

ಉಡುಪಿ, ಜೂ.8: ನೋವೆಲ್ ಕೊರೋನ ವೈರಸ್‌ನ (ಕೋವಿಡ್-19) ಸೋಂಕಿತರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತಿದ್ದು, ಸೋಮವಾರ 45 ಮಂದಿಯಲ್ಲಿ ಕೊರೋನ ಸೋಂಕಿನ ಪಾಸಿಟಿವ್ ಅಂಶ ಕಾಣಿಸಿಕೊಂಡಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ ಈಗ 946ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಆದರೂ ಉಡುಪಿಯಲ್ಲಿ ಜೂನ್ ತಿಂಗಳ ಮೊದಲ ದಿನದಿಂದ 6ರವರೆಗೆ ಅಂದರೆ ಒಟ್ಟು ಆರು ದಿನಗಳಲ್ಲಿ 701 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಬಳಿಕ ನಿನ್ನೆ 13 ಹಾಗೂ ಇಂದು 45 ಪಾಸಿಟಿವ್ ಪ್ರಕರಣಗಳು ಮಾತ್ರ ಕಂಡು ಬಂದಿವೆ.
ಉಡುಪಿ ಜಿಲ್ಲೆ ಈಗಲೂ 946 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನ ದಲ್ಲೇ ಮುಂದುವರಿದಿದೆ. ನಂತರದ ಸ್ಥಾನದಲ್ಲಿರುವ ಕಲಬುರಗಿಯಲ್ಲಿ ಇಂದು ರಾಜ್ಯದಲ್ಲೇ ಅತ್ಯಧಿಕ ಅಂದರೆ 99 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಒಟ್ಟು 759 ಸೋಂಕಿತರನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ. ಯಾದಗಿರಿ 581, ಬೆಂಗಳೂರುನಗರ 493 ಪಾಸಿಟಿವ್ ಪ್ರಕರಣಗೊಂದಿಗೆ ನಂತರದ ಸ್ಥಾನಗಳಲ್ಲಿವೆ.
ಸೋಮವಾರ ಪಾಸಿಟಿವ್ ಕಂಡುಬಂದ 45 ಮಂದಿಯಲ್ಲಿ ಉಡುಪಿ ಯವರು 9 ಮಂದಿ, ಕುಂದಾಪುರ ತಾಲೂಕಿನವರು 34 ಮಂದಿ ಹಾಗೂ ಕಾರ್ಕಳ ತಾಲೂಕಿನವರು. ಸೋಂಕು ಪತ್ತೆಯಾದ 45 ಮಂದಿಯಲ್ಲಿ 30 ಮಂದಿ ಪುರುಷರು, 11 ಮಂದಿ ಮಹಿಳೆಯರು ಹಾಗೂ 10 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದ್ದಾರೆ. ಇವರಲ್ಲಿ 44 ಮಂದಿ ಮಹಾರಾಷ್ಟ್ರ- ಮುಂಬೈಯಿಂದ ಬಂದವರಾದರೆ, 5 ವರ್ಷ ಪ್ರಾಯದ ಬಾಲಕ ನಿನ್ನೆಯಷ್ಟೇ ಪಾಸಿಟಿವ್ ಬಂದಿರುವ ಮಣಿಪುರದ 30 ವರ್ಷ ಪ್ರಾಯದ ಲ್ಯಾಬ್‌ಟೆಕ್ನಿಷಿಯನ್ ಮಹಿಳೆ ಮಗ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
193 ಸ್ಯಾಂಪಲ್ ನೆಗೆಟಿವ್: ಸೋಮವಾರ ಜಿಲ್ಲೆಯಲ್ಲಿ ಒಟ್ಟು 238 ಸ್ಯಾಂಪಲ್‌ಗಳ ವರದಿ ಬಂದಿವೆ. ಇವುಗಳಲ್ಲಿ 43ಪಾಸಿಟಿವ್ ಆಗಿದ್ದರೆ, ಉಳಿದ 193 ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಕೋವಿಡ್-19 ರೋಗದ ಗುಣ ಲಕ್ಷಣವಿರುವ ಕೇವಲ ಇಬ್ಬರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ತಲಾ ಒಬ್ಬರು ಉಸಿರಾಟದ ತೊಂದರೆ ಹಾಗೂ ಶೀತಜ್ವರದಿಂದ ಬಳಲುತಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಹೀಗಾಗಿ ಈವರೆಗೆ ಸಂಗ್ರಹಿಸಿದ 12,540 ಗಂಟಲು ದ್ರವದ ಮಾದರಿಗಳಲ್ಲಿ ರವಿವಾರದವರೆಗೆ ಒಟ್ಟು 12,512ರ ವರದಿ ಬಂದಿವೆ. ಇದರಲ್ಲಿ 11,566 ನೆಗೆಟಿವ್ ಆಗಿದ್ದರೆ, ಇಂದಿನ 45 ಸೇರಿ ಒಟ್ಟು 946 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನು ಕೇವಲ 28 ಸ್ಯಾಂಪಲ್‌ಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯಲ್ಲೀಗ 671 ಸಕ್ರೀಯ ಪ್ರಕರಣಗಳಿವೆ ಎಂದವರು ಹೇಳಿದರು.
ಇಂದು ರೋಗದ ಗುಣಲಕ್ಷಣದೊಂದಿಗೆ ಒಟ್ಟು 14 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 13 ಮಂದಿ ಪುರುಷರು ಹಾಗೂ ಓರ್ವ ಮಹಿಳೆ. ಕೊರೋನ ಶಂಕಿತರು ಇಬ್ಬರು, ಉಸಿರಾಟದ ತೊಂದರೆಯವರು ನಾಲ್ವರು ಹಾಗೂ ಶೀತಜ್ವರದವರು ಎಂಟು ಮಂದಿ ಇದರಲ್ಲಿ ಸೇರಿದ್ದಾರೆ.
ಇಂದು ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ 13 ಮಂದಿ ಬಿಡುಗಡೆಗೊಂಡಿದ್ದು, 81 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 781 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 7 ಮಂದಿ ಸೋಮವಾರ ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5173 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4394ಮಂದಿ (ಇಂದು 50) 28 ದಿನಗಳ ನಿಗಾವಣೆ ಹಾಗೂ 4843 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.
ಜಿಲ್ಲೆಯಲ್ಲಿ ಈಗಲೂ 248 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 1156 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ರುವವರು ಇತ್ತೀಚೆಗೆ ಹೊರರಾಜ್ಯಗಳಿಂದ ರೈಲು ಹಾಗೂ ವಾಹನಗಳ ಮೂಲಕ ಜಿಲ್ಲೆಗೆ ಆಗಮಿಸುವವರಾಗಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.
ಅಲ್ಪ ಚೇತರಿಕೆ: ಮುಂಬೈಯಿಂದ ಜಿಲ್ಲೆಗೆ ಆಗಮಿಸಿ ಒಂದು ವಾರ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಮನೆಗೆ ಕಳುಹಿಸಲ್ಪಟ್ಟು ಶನಿವಾರ ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆಗಾಗಿ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬೈಂದೂರಿನ 47ರ ಹರೆಯದ ಪುರುಷರಲ್ಲಿ ಅಲ್ಪ ಚೇತರಿಕೆ ಕಾಣಿಸಿದ್ದು, ಆದರೆ ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಅವರಿಗೀಗಲೂ ಆಮ್ಲಜನಕವನ್ನು ನೀಡಲಾಗುತ್ತಿದೆ ಎಂದು ಡಿಎಚ್‌ಓ ತಿಳಿಸಿದರು.







