ಮಂಗಳೂರು: ಖಾಸಗಿ ಬಸ್ ನೌಕರರಿಗೆ ಪರಿಹಾರ ಒದಗಿಸಲು ಡಿವೈಎಫ್‌ಐ ಮನವಿ

ಮಂಗಳೂರು, ಜೂ.8: ಲಾಕ್‌ಡೌನ್ ಆರಂಭಗೊಂಡ ಬಳಿಕ ಸುಮಾರು 71 ದಿನಗಳ ಕಾಲ ದ.ಕ. ಜಿಲ್ಲೆಯ ಖಾಸಗಿ ಬಸ್‌ಗಳ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದ ಸುಮಾರು 1ಸಾವಿರದಷ್ಟು ಖಾಸಗಿ ಬಸ್‌ಗಳ ಸುಮಾರು ಏಳೆಂಟು ಸಾವಿರ ಚಾಲಕ, ನಿರ್ವಾಹಕ/ಕ್ಲೀನರ್‌ಗಳು ಉದ್ಯೋಗ ಇಲ್ಲದೆ ಮನೆಗಳಲ್ಲಿ ಉಳಿಯುವಂತಾಯಿತು. ಮಾಲಕರ ಸಂಘಗಳಾಗಲಿ, ಸರಕಾರವಾಗಲಿ ಯಾವುದೇ ನೆರವು ನೀಡದಿರುವುದರಿಂದ ಕುಟುಂಬದ ದೈನಂದಿನ ಖರ್ಚುವೆಚ್ಚಗಳನ್ನೂ ಭರಿಸಲಾಗದೆ ಬಸ್ ನೌಕರರು ಸಂಕಷ್ಟಕ್ಕೊಳಗಾಗಿದ್ದಾರೆ. ಲಾಕ್‌ಡೌನ್ ಸಂದರ್ಭ ಕಾರ್ಮಿಕರಿಗೆ, ನೌಕರರಿಗೆ ಪೂರ್ಣ ವೇತನ ನೀಡಬೇಕು ಎಂದು ಸರಕಾರದ ಆದೇಶ ನೀಡಿದ್ದರೂ ಬಸ್ಸು ಸಿಬ್ಬಂದಿಗಳಿಗೆ ವೇತನವನ್ನು ಪೂರ್ಣವಾಗಿ ನಿರಾಕರಿಸಲಾಗಿದೆ. ಇದರಿಂದ ಬಸ್ ಕಾರ್ಮಿಕರ ಕಟುಂಬಗಳು ದಯನೀಯ ತಲುಪಿದೆ. ಸರಕಾರದ ವತಿಯಿಂದಲೂ ಯಾವುದೇ ಪರಿಹಾರಗಳು ಸಿಕ್ಕಿಲ್ಲ. ಹಾಗಾಗಿ ಲಾಕ್‌ಡೌನ್ ಅವಧಿಯ ತಾತ್ಕಾಲಿಕ ಪರಿಹಾರವಾಗಿ ಬಸ್ ಮಾಲಕರ ಸಂಘಗಳು ತಿಂಗಳಿಗೆ ಐದು ಸಾವಿರ ರೂಪಾಯಿಯಂತೆ ತಲಾ ಹತ್ತು ಸಾವಿರ ರೂ.ತಕ್ಷಣ ಒದಗಿಸಲು ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.
ಜೂನ್ 1ರಿಂದ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಮಾಲಕರ ಸಂಘ ಶೇ.20ರಷ್ಟು ಬಸ್ಸುಗಳನ್ನಷ್ಟೇ ರಸ್ತೆಗಿಳಿಸಿವೆ. ಕರ್ತವ್ಯಕ್ಕೆ ತೆರಳಿರುವ ನೌಕರರಿಗೆ ಅರ್ಧ ವೇತನ ಮಾತ್ರ ದೊರೆಯುತ್ತಿದೆ. ಉಳಿದವರು ಯಾವುದೇ ವೇತನ ಇಲ್ಲದೆ ಅಸಹಾಯ ಕರಾಗಿದ್ದಾರೆ. ಹಾಗಾಗಿ ಉಳಿದ ಬಸ್ ನೌಕರರಿಗೆ ಉದ್ಯೋಗ, ವೇತನದ ಸ್ಥಿತಿಯ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ರಸ್ತೆಗೆ ಇಳಿಯದ ಬಸ್ ಗಳ ನೌಕರರಿಗೆ ವೇತನದ ಅರ್ಧಭಾಗ, ಉದ್ಯೋಗಕ್ಕೆ ತೆರಳುವ ನೌಕರರಿಗೆ ವೇತನದಲ್ಲಿ ಯಾವುದೇ ಕಡಿತ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.
ಕೊರೋನ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದಿನ ನಿತ್ಯ ನೂರಾರು ಜನರ ಸಂಪರ್ಕಕ್ಕೆ ಬರುವ ಬಸ್ ಸಿಬ್ಬಂದಿಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ. ಮುನ್ನೆಚ್ಚರಿಕೆಯ ಭಾಗವಾಗಿ ಪ್ರತಿಯೊಂದು ಬಸ್ ತಂಗುದಾಣಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕಿದೆ. ಸೇವಾ ಕ್ಷೇತ್ರದಲ್ಲಿ ಪ್ರಸಕ್ತ ಸಂದರ್ಭ ಅತಿ ಅಪಾಯಕಾರಿಯಾಗಿ ದುಡಿಯುವ ಬಸ್ ನೌಕರರನ್ನು ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ, ಸೋಂಕು ಪೀಡಿತರಾದರೆ ಅವರಿಗೆ ಕೊರೋನ ವಾರಿಯರ್ಸ್‌ಗೆ ದೊರಕುವ ಎಲ್ಲಾ ಸೌಲಭ್ಯ, ಪರಿಹಾರ ದೊರಕುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಸಫ್ವಾನ್, ಬಾಝಿಲ್, ಕಿಶೋರ್, ಜಗದೀಶ್, ಅಶ್ರಫ್, ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.







