ಹಸಿರು ವಲಯಕ್ಕೆ ಭೂಸ್ವಾಧೀನ :15 ದಿನದಲ್ಲಿ ಭೂಮಿ ಗುರುತಿಸುವಿಕೆ ಪೂರ್ಣಗೊಳಿಸಲು ಉಸ್ತುವಾರಿ ಸಚಿವ ಸೂಚನೆ
ಮಂಗಳೂರು, ಜೂ.8: ಎಮ್ ಆರ್ ಪಿ ಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಪರಿಸರದಲ್ಲಿ ಉಂಟಾ ಗಿರುವ ಪರಿಸರ ಮಾಲಿನ್ಯ ಬಗೆಹರಿಸಲು ಸರಕಾರ ನೇಮಿಸಿರುವ ಸಮಿತಿಯ ಸಭೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಮುಖ್ಯವಾಗಿ 27 ಎಕರೆ ಭಾದಿತ ಪ್ರದೇಶದಲ್ಲಿ ಕಂಪೆನಿ ನಡೆಸಬೇಕಿರುವ ಹಸಿರು ವಲಯಕ್ಕೆ ಭೂಸ್ವಾಧೀನದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಸರಕಾರದ ಆದೇಶ ಬಂದು ನಾಲ್ಕು ವರ್ಷ ಸಂದರೂ ಹಸಿರು ವಲಯಕ್ಕೆ ಭಾದಿತ ಪ್ರದೇಶದ ಭೂಮಿ ಗುರುತಿವಲ್ಲಿ ಅಧಿಕಾರಿಗಳಯ ವಿಫಲ ಆಗಿರುವ ಕುರಿತು ಗಮನ ಸೆಳೆದರು. ತಕ್ಷಣ ಸಚಿವರು ತಾರತಮ್ಯವಿಲ್ಲದೆ ಹೆಚ್ಚು ಭಾದಿತ ಪ್ರದೇಶದ ಭೂಮಿ ಗುರುತು ಮಾಡಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕು, ಯಾವುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗಬಾರದು ಎಂದು ಸೂಚಿಸಿದರು.
ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ಸರಕಾರದ ಆರು ಅಂಶಗಳ ಪರಿಹಾರದ ಘೋಷಣೆಯ ಹೊರತಾಗಿಯೂ ಕಂಪೆನಿಯ ಸುತ್ತ ಶಬ್ದ, ವಾಯು ಮಾಲಿನ್ಯದಿಂದ ಜನತೆ ಕಂಗೆಟ್ಟಿದ್ದಾರೆ. ಹೆಚ್ಚು ಭಾದಿತ ಪ್ರದೇಶದ ಜನರನ್ನು ಅಲ್ಲಿಂದ ಸ್ಥಳಾಂತರಿಸಿ, ಹಸಿರು ವಲಯ ನಿರ್ಮಾಣ ತಕ್ಷಣ ಆಗಬೇಕಿದೆ. ಹಸಿರು ವಲಯ ನಿರ್ಮಾಣದಲ್ಲಿ ಕಾಲಹರಣ ಸಲ್ಲದು ಎಂದರು. ಕಂಪೆನಿ ಹಾಗೂ ಅಧಿಕಾರಿಗಳ ಮಾತುಗಳನ್ನು ಆಲಿಸಿದ ಉಸ್ತುವಾರಿ ಸಚಿವರು ಹದಿನೈದು ದಿನಗಳ ಕಾಲಮಿತಿ ಒಳಗಡೆ ಹಸಿರು ವಲಯಕ್ಕೆ ಭೂಮಿ ಗುರುತಿಸುವ ಕಾರ್ಯ ಪೂರ್ಣಗೊಳಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ಕೈಗಾರಿಕಾ ಭೂಸ್ವಾಧೀನ ಬೋರ್ಡ್ ನ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಸ್ಥರು, ಹೋರಾಟ ಸಮಿತಿಯವರು ಪಕ್ಷಭೇದ ಮರೆತು ಸಮಸ್ಯೆ ಬಗೆಹರಿಸಲು ಸಹಕರಿಸುವಂತೆ, ಅಧಿಕಾರಿಗಳು ಕಾಲಮಿತಿಯನ್ನು ದಾಟದಂತೆ ಶಾಸಕ ಉಮಾನಾಥ ಕೋಟ್ಯಾನ್ ಮನವಿ ಮಾಡಿದರು. ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಸಹಾಯಕ ಆಯುಕ್ತ ಮದನ್ ಮೋಹನ್, ಸಣ್ಣ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು, ಎಮ್ ಆರ್ ಪಿಎಲ್ ಪ್ರಧಾನ ವ್ಯವಸ್ಣಾಪಕ ವೆಂಕಟೇಶ್, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.







