'ಜನಸೇವಕ' ವ್ಯಾಪ್ತಿಗೆ ಆಧಾರ್, ಎಪಿಎಲ್, ಗುರುತಿನ ಚೀಟಿ ನೋಂದಣಿ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಜೂ. 8: ಆಧಾರ್ ಕಾರ್ಡ್, ಎಪಿಎಲ್ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಗೆ ಹೆಸರು ನೋಂದಣಿ ಸೇವೆಗಳನ್ನು ಸಕಾಲ ಯೋಜನೆಯ 'ಜನಸೇವಕ' ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ನಾಗರಿಕರ ಮನೆ ಬಾಗಿಲಿಗೆ ಸರಕಾರ ಸೇವೆಗಳನ್ನು ಒದಗಿಸುವ `ಜನಸೇವಕ' ಯೋಜನೆ ಪುನರ್ ಆರಂಭಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಪ್ರಸ್ತುತ 'ಜನಸೇವಕ' ಯೋಜನೆ ಬೆಂಗಳೂರಿನ ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ದಾಸರಹಳ್ಳಿ ಕ್ಷೇತ್ರಗಳಲ್ಲಿ ಜಾರಿಯಲ್ಲಿದ್ದು, ಆದಾಯ, ಜಾತಿ ಪ್ರಮಾಣ ಪತ್ರ, ಹಿರಿಯ ನಾಗರಿಕರ ಪಿಂಚಣಿ, ಕಾರ್ಮಿಕ, ಆರೋಗ್ಯ, ಪೊಲೀಸ್ ಸೇವೆಗಳು ಸೇರಿದಂತೆ 50 ಸೇವೆಗಳನ್ನು ಒದಗಿಸಲಾಗುತ್ತಿತ್ತು, ಇನ್ನು ಮುಂದೆ ಈ ವ್ಯಾಪ್ತಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ತೀರಾ ಅಗತ್ಯವಾದ ಆಧಾರ್ ಕಾರ್ಡ್, ಎಪಿಎಲ್ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಗೆ ಹೆಸರು ನೋಂದಣಿ ಸೇವೆಗಳನ್ನು ತರಲಾಗುವುದು ಎಂದರು.
ಆಧಾರ್ ಸಂಖ್ಯೆಯು ಇತ್ತೀಚಿಗೆ ಎಲ್ಲ ವ್ಯವಹಾರಕ್ಕೂ ಅಗತ್ಯವಾಗಿದೆ. ಇಂತಹ ಸ್ಥಿತಿಯಲ್ಲಿ ಹಿರಿಯ ನಾಗರಿಕರು, ಅಸಹಾಯಕರು ಈ ಸೇವೆ ಪಡೆದುಕೊಳ್ಳಲು ಪರದಾಡುವಂತಾಗಿದೆ. ವೃದ್ಧರು ಈ ಕಷ್ಟ ಪಡುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಆಧಾರ್ ನೋಂದಣಿ ಮತ್ತು ಆಧಾರ್ ಅಫ್‍ಡೆಟ್ ಮಾಡುವ ಸೇವೆಯನ್ನು ಜನ ಸೇವಕ ವ್ಯಾಪ್ತಿಗೆ ತರಲಾಗುತ್ತಿದೆ ಎಂದರು.
ರಾಜ್ಯದಲ್ಲಿ ದಿನೇ ದಿನೇ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವೃದ್ಧರು ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಜನಸೇವಕ ಯೋಜನೆಯಡಿ ಜನರಿಗೆ ಸೇವೆಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ. ಜೊತೆಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಇ-ಆಡಳಿತ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಸಕಾಲ ನಿರ್ದೇಶಕ ರಾಜೀವ್ ಚಾವ್ಲಾ, ಸಕಾಲ ಮಿಷನ್ ನಿರ್ದೇಶಕ ವರಪ್ರಸಾದ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.







