‘ಆನ್‍ಲೈನ್ ಶಿಕ್ಷಣ’ದ ಬಗ್ಗೆ ತಜ್ಞರ ಜೊತೆ ಚರ್ಚಿಸಿ ತೀರ್ಮಾನ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಜೂ.8: ಆನ್‍ಲೈನ್ ಶಿಕ್ಷಣ ಕುರಿತು ಜೂ.10ರಂದು ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಯುನಿಸೆಫ್ ಪ್ರತಿನಿಧಿ, ಅಜೀಮ್ ಪ್ರೇಮ್ ಜೀ ಫೌಂಡೇಶನ್ ಸೇರಿದಂತೆ ವಿದ್ಯಾರ್ಥಿ ಶಿಕ್ಷಣದಲ್ಲಿ ಸಂಶೋಧನಾನಿರತ ಶಿಕ್ಷಣ ತಜ್ಞರು ಹಾಗೂ ಇನ್ನು ಕೆಲ ಪರಿಣಿತರೊಂದಿಗೆ ಚರ್ಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಹಾಗೆಯೇ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ವಯ ವಿದ್ಯಾರ್ಥಿಗಳ ಹಿತರಕ್ಷಿಸುವ ಸಂಬಂಧದ ಒಂದು ಸೂಕ್ತ ನಿರ್ಣಯವೊಂದನ್ನು ಆನ್‍ಲೈನ್ ಶಿಕ್ಷಣ ಕುರಿತಂತೆ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಶಾಲಾ ಆರಂಭದ ಸ್ಪಷ್ಟೀಕರಣ: ಶಾಲಾ ಆರಂಭದ ಕುರಿತಂತೆ ವಿವಿಧ ರಾಜ್ಯಗಳ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ವಿಡಿಯೋ ಸಂವಾದ ನಡೆಸಿ ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಆ.15ರ ಬಳಿಕವಷ್ಟೇ ಶಾಲೆಗಳ ಆರಂಭದ ದಿನಾಂಕವನ್ನು ನಿಗದಿಪಡಿಸಲಾಗುವುದೆಂಬ ಸುಳಿವು ನೀಡಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರಕಾರದ ನಿರ್ದೇಶನದಂತೆ ಶಿಕ್ಷಣ ಇಲಾಖೆಯು ನಮ್ಮ ರಾಜ್ಯದಲ್ಲಿ ಶಾಲಾರಂಭದ ಕುರಿತು ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಲು ಜೂ.10, 11 ಮತ್ತು 12ರಂದು ಪೋಷಕರ, ಎಸ್‍ಡಿಎಂಸಿ, ಎಸ್‍ಎಂಸಿ ಸಭೆಗಳನ್ನು ನಡೆಸಿ ಕ್ರಮ ವಹಿಸಲು ನೀಡಲಾಗಿದ್ದ ಸೂಚನೆಯನ್ನು ಜೂ.20ರವರೆಗೆ ವಿಸ್ತರಿಸಲು ಇಂದಿನ ಸಭೆಯು ನಿರ್ಣಯಿಸಿದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಸಂದರ್ಭದಲ್ಲಿಯೂ ಶಿಕ್ಷಣ ಇಲಾಖೆ ಜು.1ರಿಂದ ಯಾವ ಶಾಲೆಯನ್ನೂ ಪ್ರಾರಂಭಿಸುವ ಉದ್ದೇಶವನ್ನು ಹೊಂದಿಲ್ಲ. ಈ ಬಗ್ಗೆ ಯಾವುದೇ ಪೋಷಕರು ಅನವಶ್ಯಕವಾಗಿ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಸಂಬಂಧ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಸಹಮತವನ್ನು ಪಡೆಯಲಾಗುವುದು ಎಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







