ಬೆಂಗಳೂರಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ 493ಕ್ಕೆ ಏರಿಕೆ: ಒಟ್ಟು 18 ಸಾವು

ಬೆಂಗಳೂರು, ಜೂ.8: ನಗರದಲ್ಲಿ ಸೋಲದೇವನಹಳ್ಳಿ ಹೊಯ್ಸಳ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 18 ಜನರಿಗೆ ಕೊರೋನ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 493 ಕೊರೋನ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 18 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ದೃಡಪಡಿಸಿದೆ.
ಅಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಗಳಲ್ಲಿ ಒಟ್ಟು 88 ವ್ಯಕ್ತಿಗಳನ್ನು ಹಾಗೂ ಈವರೆಗೂ 12,779 ವ್ಯಕ್ತಿಗಳಿಗೆ ಕೋವಿಡ್ 19 ತಪಾಸಣೆ ನಡೆಸಲಾಗಿದೆ.
ಕೊರೋನ ಸೋಂಕಿತ ಹೊಯ್ಸಳ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಲದೇವನಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 15 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ತಾತ್ಕಾಲಿಕವಾಗಿ ಈ ಠಾಣೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಮೂರು ಸಾವು
ಕೊರೋನ ಮಹಾಮಾರಿಗೆ ಮೃತಪಟ್ಟ ಮೂವರೂ ಬೆಂಗಳೂರು ನಗರದವರು. ರೋಗಿ ಸಂಖ್ಯೆ 4851ರ 67 ವರ್ಷದ ಪರುಷ, 48 ವರ್ಷದ ಮಹಿಳೆ ಹಾಗೂ 65 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.





