ಬೆಂಗಳೂರು: ಕಾರ್ಮಿಕರನ್ನು ಹೊತ್ತು ಉತ್ತರ ಪ್ರದೇಶಕ್ಕೆ ತೆರಳಿದ ಶ್ರಮಿಕ್ ರೈಲು
ಬೆಂಗಳೂರು, ಜೂ. 8: ಲಾಕ್‍ಡೌನ್‍ನಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರು ಅವರ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಶ್ರಮಿಕ್ ರೈಲುಗಳ ಸಂಚಾರ ಪುನರಾರಂಭಗೊಂಡಿದ್ದು, ಇಂದು ನಗರದಿಂದ ಉತ್ತರಪ್ರದೇಶಕ್ಕೆ ಶ್ರಮಿಕ್ ರೈಲು ತೆರಳಿತು.
ನಗರದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ 1750 ವಲಸಿಗ ಕಾರ್ಮಿಕರನ್ನು ಹೊತ್ತ ಶ್ರಮಿಕ್ ರೈಲು ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿತು. ರಾಜ್ಯದಲ್ಲಿರುವ ಹಲವು ವಲಸಿಗ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.
ಸೇವಾ ಸಿಂಧು ಆಪ್‍ನಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ಕಾರ್ಯವನ್ನು ಕಳೆದ ಒಂದು ತಿಂಗಳಿಂದ ಮಾಡಲಾಗುತ್ತಿದ್ದು, ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಲಾಕ್‍ಡೌನ್‍ನಲ್ಲಿ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರು ಉತ್ತರಪ್ರದೇಶದ ಬಿಹಾರ, ಪಶ್ಚಿಮಬಂಗಾಳ, ಈಶಾನ್ಯ ರಾಜ್ಯಗಳಿಗೆ ತೆರಳಿದ್ದಾರೆ. ಬೇರೆ ರಾಜ್ಯಗಳಿಂದ ಕನ್ನಡಿಗ ವಲಸಿಗ ಕಾರ್ಮಿಕರನ್ನು ಶ್ರಮಿಕ್ ರೈಲುಗಳ ಮೂಲಕ ರಾಜ್ಯಕ್ಕೆ ಕರೆತರಲಾಗಿದೆ.







