ಘೋರವಾದ ಆರ್ಥಿಕ ಬಿಕ್ಕಟ್ಟಿನೆಡೆಗೆ ಅಮೆರಿಕ: ತಜ್ಞರ ಎಚ್ಚರಿಕೆ

ವಾಶಿಂಗ್ಟನ್,ಜೂ.8: ಏಳು ದಶಕಗಳಿಗಿಂತಲೂ ಅಧಿಕ ಸಮಯದ ಬಳಿಕ ಅಮೆರಿಕವು ಈ ವರ್ಷ ಅತ್ಯಂತ ಕೆಟ್ಟದಾದಆರ್ಥಿಕ ಬಿಕ್ಕಟ್ಟಿನಿಂದ ಬಾಧಿತವಾಗಲಿದೆಯೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಅಮೆರಿಕದಲ್ಲಿ ಕೊರೋನ ವೈರಸ್ ಹಾವಳಿಯ ಎರಡನೆ ಅಲೆಯು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು ದೇಶದ ಆರ್ಥಿಕತೆಗೆ ಮತ್ತೊಮ್ಮೆ ಬೆದರಿಕೆಯೊಡ್ಡಲಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕ ಪರಿಣಾಮವಾಗಿ ಉಂಟಾಗಿರುವ ಆರ್ಥಿಕ ಹಿಂಜರಿತದಿಂದಾಗಿ ಅಮೆರಿಕದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವು 2020ರಲ್ಲಿ ಶೇ.5.9ಕ್ಕೆ ಕುಸಿಯಲಿದೆ. 1946ರಲ್ಲಿ ಎರಡನೆ ವಿಶ್ವಮಹಾಯುದ್ಧದ ಆನಂತರ ಅಮೆರಿಕದ ಜಿಡಿಪಿ 11.6 ಶೇಕಡಕ್ಕೆ ಕುಸಿದಿದ್ದು, ಅದರ ಆನಂತರ ಆ ದೇಶ ಕಂಡಿರುವ ಅತಿ ದೊಡ್ಡ ಜಿಡಿಪಿ ಪತನ ಇದಾಗಿದೆ.
2020ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.5ರಷ್ಟು ಕುಸಿತವಾಗುವ ನಿರೀಕ್ಷೆಯಿದೆಯೆಂದು ಅಮೆರಿಕದ ಔದ್ಯಮಿಕ ಆರ್ಥಿಕತೆಯ ರಾಷ್ಟ್ರೀಯ ಸಂಸ್ಥೆ (ಎನ್‌ಎಬಿಇ)ಯ ತಜ್ಞರು ಹೇಳಿದ್ದಾರೆ.
ಆದರೆ ವರ್ಷದ ದ್ವಿತೀಯಾರ್ಧದಲ್ಲಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.9.1 ಹಾಗೂ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ.6.8ರಷ್ಟು ಬಲವಾದ ವಾರ್ಷಿಕ ವಿಸ್ತರಣೆಯಾಗಲಿದೆಯೆಂದು ಎನ್‌ಎಬಿಎ ಸಮಿತಿ ಭವಿಷ್ಯ ನುಡಿದಿದೆ.2021ರಲ್ಲಿ ಶೇ.3.6 ಜಿಡಿಪಿ ಬೆಳವಣಿಗೆಯಾಗುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.
ಆದಾಗ್ಯೂ 2020ನೇ ಇಸವಿಯುದ್ದಕ್ಕೂ ಕೋವಿಡ್-19 ಸೋಂಕಿನ ಎರಡನೆ ಅಲೆಯು ತಲೆಯೆತ್ತುವ ಸಾಧ್ಯತೆಯಿಯೆಂದು ಸಮಿತಿಯ ಶೇ.87ರಷ್ಟು ಸದಸ್ಯರು ಭವಿಷ್ಯ ನುಡಿದಿದ್ದಾರೆ.







