ಇನ್ನು ವಿವಿಐಪಿ ವಿಮಾನಗಳಲ್ಲಿ ಸ್ವಯಂ ರಕ್ಷಣಾ ಸೂಟ್

ಹೊಸದಿಲ್ಲಿ, ಜೂ.8: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಇತರ ಗಣ್ಯರ ಪ್ರಯಾಣಕ್ಕಾಗಿ ವಿಶೇಷವಾಗಿ ರೂಪಿಸಿದ ಎರಡು ಬಿ777 ವಿಮಾನಗಳನ್ನು ಮುಂದಿನ ಸೆಪ್ಟೆಂಬರ್ ಒಳಗಾಗಿ ಬೋಯಿಂಗ್ ಕಂಪೆನಿ ಏರ್ ಇಂಡಿಯಾಗೆ ಪೂರೈಸಲಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಅತಿಗಣ್ಯರ ಪ್ರಯಾಣಕ್ಕೆ ಮೀಸಲಾದ ಈ ಎರಡು ವಿಮಾನಗಳು ಜುಲೈನಲ್ಲಿ ಸೇವೆಗೆ ಲಭ್ಯವಾಗಲಿವೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಏರ್‌ಇಂಡಿಯಾ ಪ್ರಕಟಿಸಿತ್ತು. ಕೋವಿಡ್-19 ಕಾರಣದಿಂದಾಗಿ ಸ್ವಲ್ಪಮಟ್ಟಿಗೆ ವಿಮಾನ ಪೂರೈಕೆ ವಿಳಂಬವಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
ಈ ವಿಮಾನಗಳನ್ನು ಏರ್ ಇಂಡಿಯಾ ಪೈಲಟ್‌ಗಳ ಬದಲಾಗಿ ಭಾರತೀಯ ವಾಯುಪಡೆ ಪೈಲಟ್‌ಗಳು ಚಲಾಯಿಸಲಿದ್ದಾರೆ. ಆದರೆ ಈ ಅತ್ಯಾಧುನಿಕ ವಿಮಾನಗಳನ್ನು ಏರ್‌ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್‌ಎಲ್) ಸಿಬ್ಬಂದಿ ನಿರ್ವಹಿಸಲಿದ್ದಾರೆ. ಪ್ರಸ್ತುತ ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳು ಏರ್‌ಇಂಡಿಯಾದ ಬಿ747 ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಹೊಸ ವಿಮಾನಗಳು ಬಂದ ಬಳಿಕ ಇವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತದೆ.
ಬಿ777 ವಿಮಾನಗಳು ಲಾರ್ಜ್ ಏರ್‌ಕ್ರಾಫ್ಟ್ ಇನ್‌ಫ್ರಾರೆಡ್ ಕೌಂಟರ್‌ಮೆಷರ್ಸ್ ಎಂಬ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ. ಕಳೆದ ಫೆಬ್ರವರಿಯಲ್ಲಿ ಎರಡು ರಕ್ಷಣಾ ವ್ಯವಸ್ಥೆಯನ್ನು 190 ದಶಲಕ್ಷ ಡಾಲರ್ ವೆಚ್ಚದಲ್ಲಿ ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿಕೊಂಡಿತ್ತು.







