ಪ್ರತ್ಯೇಕ ಪ್ರಕರಣಗಳಲ್ಲಿ ಒಂಬತ್ತು ಉಗ್ರರು ಹತ

ಹೊಸದಿಲ್ಲಿ, ಜೂ.8: ಹಿಜ್‌ಬುಲ್ ಮುಜಾಹಿದ್ದೀನ್‌ನ ಮೂವರು ಕಮಾಂಡರ್‌ಗಳು ಸೇರಿದಂತೆ ಒಂಬತ್ತು ಮಂದಿ ಉಗ್ರರು ಜಮ್ಮು ಕಾಶ್ಮೀರದಲ್ಲಿ ಕಳೆದ 24 ಗಂಟೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ.
ಮುಂಜಾನೆ ದಕ್ಷಿಣ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಗುಂಡಿನ ದಾಳಿಗೆ ಮುಂದಾದ ನಾಲ್ವರು ಉಗ್ರಗಾಮಿಗಳನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ. ಸೇನೆ, ಸಿಆರ್‌ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆ, ಗುಪ್ತಚರ ಮಾಹಿತಿಯ ಆಧಾರದಲ್ಲಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು.
‘‘ಮುಂಜಾನೆ 3ರಿಂದ ಸತತ ನಾಲ್ಕು ಗಂಟೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ನಾಗರಿಕರು, ಸ್ಥಳೀಯರಲ್ಲದ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದ ಅವರು ಪೊಲೀಸರನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದರು. 2019ರಲ್ಲಿ ಟ್ರಕ್ ಚಾಲಕರನ್ನೂ ಗಾಯಗೊಳಿಸಿದ್ದರು’’ ಎಂದು ಮೇಜರ್ ಜನರಲ್ ಎ.ಸೇನ್‌ಗುಪ್ತಾ ಹೇಳಿದ್ದಾರೆ.
ಇದೇ ಜಿಲ್ಲೆಯ ರೆಬಾನ್ ಪ್ರದೇಶದಲ್ಲಿ ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ ಐವರು ಉಗ್ರರು ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಕ್ಷೇತ್ರ ಕಮಾಂಡರ್ ಮತ್ತು ಒಬ್ಬ ವಿದೇಶಿ ಪ್ರಜೆ ಸೇರಿದ್ದಾರೆ. ಆರು ಗಂಟೆಗಳ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಯ ಮೇಲೂ ಉಗ್ರರು ಕಲ್ಲು ತೂರಾಟ ನಡೆಸಿದ್ದಾನೆ. ಹೆಚ್ಚುವರಿ ಪಡೆ ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಲಾಗಿದ್ದು, ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ಎರಡು ವಾರಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರು ಮಂದಿ ಕಮಾಂಡರ್‌ಗಳು ಸೇರಿದಂತೆ 22 ಉಗ್ರರನ್ನು ಸದೆಬಡಿಯಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಂಗ್ ಸಿಂಗ್ ಹೇಳಿದ್ದಾರೆ.