ಭಾರತದ ಗಡಿ ಸುರಕ್ಷಿತ: ಅಮಿತ್ ಶಾ ಹೇಳಿಕೆಗೆ ರಾಹುಲ್ ಅಣಕ

ಹೊಸದಿಲ್ಲಿ, ಜೂ.8: ಭಾರತದ ಗಡಿ ಸುರಕ್ಷಿತವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅಣಕಿಸಿದ್ದಾರೆ.
‘‘ವಾಸ್ತವ ಸ್ಥಿತಿಯ ಅರಿವು ಪ್ರತಿಯೊಬ್ಬರಿಗೂ ಇದೆ’’ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದ ಜನತೆಯನ್ನು ಉದ್ದೇಶಿಸಿ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ ಈ ಪ್ರತಿಪಾದನೆ ಮಾಡಿದ್ದರು.
‘‘ಭಾರತದ ರಕ್ಷಣಾ ನೀತಿ ಜಾಗತಿಕವಾಗಿ ಸ್ವೀಕಾರಾರ್ಹವಾಗಿದೆ. ತನ್ನ ಗಡಿಯನ್ನು ಯಾವುದಾದರೂ ದೇಶಕ್ಕೆ ಕಾಪಾಡಿಕೊಳ್ಳಲು ಸಾಧ್ಯವಾಗಿದ್ದರೆ ಅದು ಭಾರತಕ್ಕೆ ಎಂದು ಅಮೆರಿಕ ಹಾಗೂ ಇಸ್ರೇಲ್ ಹೇಳಿದ ಬಳಿಕ ಇಡೀ ವಿಶ್ವವೇ ಇದನ್ನು ಒಪ್ಪಿಕೊಂಡಿದೆ’’ ಎಂದು ಶಾ ಬಣ್ಣಿಸಿದ್ದರು.
ಭಾರತ ಹಾಗೂ ಚೀನಾ ನಡುವೆ ಪೂರ್ವ ಲಡಾಖ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.
ಗೃಹಸಚಿವರು ಭ್ರಮಾಲೋಕದಲ್ಲಿದ್ದಾರೆ. ಅವರ ಖುಷಿಗೆ ಹಾಗೆ ಹೇಳಿಕೆ ನೀಡಿರಬಹುದು; ಆದರೆ ವಾಸ್ತವ ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಮಧ್ಯೆ ದೇಶ ಕೊರೋನ ಸಾಂಕ್ರಾಮಿಕದಲ್ಲಿ ಸಿಲುಕಿದ್ದರೆ ಬಿಜೆಪಿ ಹಣ ಮತ್ತು ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದ್ದು, ಶಾ ಅವರ ವರ್ಚುವಲ್ ರ್ಯಾಲಿ ಬಿಹಾರದ ಜನತೆಗೆ ಮಾಡಿದ ಅವಮಾನ ಎಂದು ಹೇಳಿದೆ.
ಮಾಜಿ ಕೇಂದ್ರ ಸಚಿವ ಅಖಿಲೇಶ್ ಪ್ರಸಾದ್ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿ, ರೋಗ ಮತ್ತು ಹಸಿವಿನಿಂದ ಜನ ಸಾಯುತ್ತಿರುವಾಗ ರಾಜಕೀಯ ಉದ್ದೇಶದಿಂದ ಶಾ ರ್ಯಾಲಿ ನಡೆಸುತ್ತಿದ್ದಾರೆ. ಇದಕ್ಕಾಗಿ ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಜನರಿಗೆ ಸುಮಾರು ಒಂದು ಲಕ್ಷ ಮೊಬೈಲ್ ವಿತರಿಸಲಾಗಿದೆ ಎಂದು ಅವರು ಆಪಾದಿಸಿದ್ದಾರೆ.







