ಮಂಗಳೂರು ಸೆಂಟ್ರಲ್ ಮಾರುಕಟ್ಟೆ ತೆರೆಯುವ ವ್ಯಾಪಾರಸ್ಥರ ಪ್ರಯತ್ನಕ್ಕೆ ಮನಪಾದಿಂದ ತಡೆ
ಮಾರುಕಟ್ಟೆಗೆ ಪೊಲೀಸ್ ಬಂದೋಬಸ್ತ್

ಮಂಗಳೂರು, ಜೂ.9: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದ್ದ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳು ಮರಳಿ ಮಾರುಕಟ್ಟೆಗೆ ಮರಳುವ ಪ್ರಯತ್ನಕ್ಕೆ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ತಡೆಯೊಡ್ಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮಾರುಕಟ್ಟೆಯನ್ನು ತೆರೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ನಡುವೆ ಮನಪಾ ಉಪ ಆಯುಕ್ತ ಡಾ.ಸಂತೋಷ್ ಕುಮಾರ್ ಸಹಿತ ಅಧಿಕಾರಿಗಳು ವ್ಯಾಪಾರಿಗಳ ಮನವೊಲಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ವ್ಯಾಪಾರಿಗಳು ಸೆಂಟ್ರಲ್ ಮಾರುಕಟ್ಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಮಾಯಿಸಿದ್ದಾರೆ.
ಎಲ್ಲ ಕಡೆ ಸೋಮವಾರದಿಂದ ವ್ಯಾಪಾರ ವಹಿವಾಟುಗಳು ಆರಂಭವಾಗಿರುವುದರಿಂದ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಮಂಗಳವಾರದಿಂದ ವ್ಯಾಪಾರ ನಡೆಸುವುದಾಗಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಸೋಮವಾರ ತಿಳಿಸಿತ್ತು. ಅದರಂತೆ ಮಂಗಳವಾರ ಬೆಳಗ್ಗೆ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಸ್ತಫ ನೇತೃತ್ವದಲ್ಲಿ ವ್ಯಾಪಾರಸ್ಥರು ಮಾರುಕಟ್ಟೆಗೆ ಆಗಮಿಸಿದ್ದಾರೆ. ಆದರೆ ಅದಕ್ಕೂ ಮೊದಲು ಮಾರುಕಟ್ಟೆ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ.























